ಕೊಪ್ಪಳ: ತನ್ನ ವಿರುದ್ಧ ಪತ್ನಿಗೆ ಚಾಡಿ ಹೇಳುತ್ತಿದ್ದಾನೆ ಎಂದು ಕುಪಿತಗೊಂಡ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಚಾಕು ಇರಿದು ಕೊಲೆ ಮಾಡಿದ ಘಟನೆ ನಗರದ ಎಚ್‌ಆರ್‌ಎಸ್ ಕಾಲೋನಿಯಲ್ಲಿ ಇಂದು ಮಂಗಳವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯನ್ನು ಮೌಲಾಹುಸೇನ್ (೩೬) ಎಂದು ಗುರುತಿಸಲಾಗಿದೆ.
ಕೊಲೆ ಆರೋಪಿಯನ್ನು ಅದೇ ಏರಿಯಾದ ನೂರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇಬ್ಬರೂ ಚಿಕನ್ ವ್ಯಾಪಾರಿಗಳಾಗಿದ್ದರು. ಆದರೆ ತನ್ನ ಪತ್ನಿಗೆ ಮೌಲಾ ಹುಸೇನ್ ಚಾಡಿ ಹೇಳುತ್ತಿದ್ದಾನೆ ಎಂಬ ಕಾರಣಕ್ಕೆ ನೂರ್ ಅಹ್ಮದ್ ಈ ಕೃತ್ಯ ಎಸಗಿದ್ದಾನೆ. ಚಾಕು ಇರಿತದಿಂದ ತೀವ್ರ ಗಾಯಕ್ಕೀಡಾದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕೊಲೆ ಮಾಡಿದ ಬಳಿಕ ನೂರ್ ಅಹ್ಮದ್ ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ ಈ ಬಗ್ಗೆ ಬರೆದುಕೊಂಡು ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.