ಮೈಸೂರು: ಈ ಬಾರಿ ದಸರಾಕ್ಕೆಂದು ಸಾಂಸ್ಕೃತಿಕ ನಗರಿಗೆ ಬರುವ ಪ್ರವಾಸಿಗರಿಗಾಗಿ ಕೆಎಸ್ ಆರ್ ಟಿಸಿ 600 ಹೆಚ್ಚುವರಿ ಬಸ್ ಗಳ ಸೇವೆ ಒದಗಿಸಲಿದೆ.
ಪ್ರಸ್ತುತ ಕೆಎಸ್ ಆರ್ ಟಿಸಿ ಮೈಸೂರು ವಿಭಾಗದಲ್ಲಿ 1002 ಬಸ್ ಗಳು ನಿತ್ಯ ಸಂಚಾರ ಕೈಗೊಳ್ಳುತ್ತಿದ್ದು, 8 ಸಾವಿರಕ್ಕೂ ಅಧಿಕ ಟ್ರಿಪ್ ಗಳಲ್ಲಿ ಸಂಚರಿಸುತ್ತಿವೆ. ಇದರೊಟ್ಟಿಗೆ ಮೈಸೂರು ವಿಭಾಗವು ಇತರೆ ವಿಭಾಗಗಳಿಂದ 350 ಹೆಚ್ಚುವರಿ ಬಸ್ ಗಳನ್ನು ದಸರೆಗಾಗಿ ಎರವಲು ಪಡೆಯಲಿದೆ. ಮಂಡ್ಯ, ಚಾಮರಾಜನಗರ, ಹಾಸನ ಮೊದಲಾದ ಡಿಪೊಗಳಿಂದ ಈ ಬಸ್ ಗಳನ್ನು ಪಡೆಯಲಾಗುತ್ತಿದೆ. ಇದರ ಜೊತೆಗೆ ಬೆಂಗಳೂರು ವಿಭಾಗವು ಬೆಂಗಳೂರು–ಮೈಸೂರು ನಡುವೆ 250 ಬಸ್ ಗಳನ್ನು ಹೆಚ್ಚುವರಿಯಾಗಿ ಓಡಿಸಲಿದೆ. ಈ ಎಲ್ಲ ಬಸ್ ಗಳು ಮೈಸೂರು–ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿವೆ.
ಈ ಬಾರಿ ದಸರಾ ಮಹೋತ್ಸವವು ಅಕ್ಟೋಬರ್ 15ರಿಂದ 24ರವರೆಗೆ ನಡೆಯಲಿವೆ. ಹೆಚ್ಚುವರಿ ಬಸ್ ಗಳ ಸಂಚಾರವು ಅ.19ರಿಂದ ಆರಂಭಗೊಂಡು 26ರವರೆಗೆ ಇರಲಿದೆ. ಪ್ರಸ್ತುತ ಮೈಸೂರು ವಿಭಾಗದಲ್ಲಿ ನಿತ್ಯ ಸರಾಸರಿ 5.2 ಲಕ್ಷ ಮಂದಿ ಪ್ರಯಾಣಿಸುತ್ತಿದ್ದು, ಈ ಸಂಖ್ಯೆಯು ದಸರಾ ಸಂದರ್ಭದಲ್ಲಿ ಕನಿಷ್ಠ ಶೇ 20ರಷ್ಟು ಹೆಚ್ಚಾಗಬಹುದು ಎಂದು ಕೆಎಸ್ ಆರ್ ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.