ಚಿತ್ರದುರ್ಗ: ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನವೂ ಆತ್ಮಹತ್ಯೆಗೆ ಪ್ರೇರಣೆಯಾಗಿದ್ದು, ಆತ್ಮಹತ್ಯೆ ತಡೆಗಟ್ಟುವಲ್ಲಿ ಸಮುದಾಯವು ಬೇಗನೆ ಆತ್ಮಹತ್ಯೆ ಅಪಾಯದಲ್ಲಿರುವವರನ್ನು ಗುರುತಿಸಿ, ಚಿಕಿತ್ಸೆ ಸಮಾಲೋಚನೆ ಕೊಡಿಸುವುದರ ಮೂಲಕ ತಡೆಗಟ್ಟಬಹುದು ಎಂದು ಜಿಲ್ಲಾ ಮಾನಸಿಕ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಜಿ.ಓ.ನಾಗರಾಜ್ ಹೇಳಿದರು.
ನಗರದ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮಹತ್ಯೆಗೆ ಪಕ್ಷಪಾತ, ಜಾತಿ, ಜನಾಂಗ, ಲಿಂಗ ಇಲ್ಲ. ಎಲ್ಲ ಜನಾಂಗದಲ್ಲೂ ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತವೆ. ಅವರನ್ನು ಗುರುತಿಸಿ ಚಿಕಿತ್ಸೆ, ಆಪ್ತ ಸಮಾಲೋಚನೆ ಮೂಲಕ ತಡೆಗಟ್ಟಬಹುದೆಂದು ತಿಳಿಸಿದರು. ಆತ್ಮಹತ್ಯೆ ಎಂದರೆ ತನ್ನ ಜೀವನವನ್ನು ಕೊನೆಗೊಳಿಸುವ ಉದ್ದೇಶದಿಂದ ಮಾಡುವ ಕ್ರಿಯೆಗೆ ಆತ್ಮಹತ್ಯೆ ಎಂದು ಕರೆಯುತ್ತಾರೆ. ಆತ್ಮಹತ್ಯೆಯು ದುರಂತ ಮತ್ತು ದುಃಖದ ಸಂಗತಿಯಾಗಿದೆ. 2014ರ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 1,31,66 ಜನ ಆತ್ಮಹತ್ಯೆಯಿಂದ ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ.
ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, TELE MANAS Toll free Number 14416 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ ಸಮಾಲೋಚನೆ ಪಡೆಯಬಹುದು ಎಂದು ತಿಳಿಸಿದರು. ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯಾ ಲಕ್ಷಣಗಳು, ಆತ್ಮಹತ್ಯೆ ತಡೆಗಟ್ಟುವುದು ಮಾನಸಿಕವಾಗಿ ನೆಮ್ಮದಿಯಾಗಿರುವುದು, ಮನಸ್ಸು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಭಾಗವಹಿಸಿದ ಎಲ್ಲಾ ಪ್ರಶಕ್ಷಣಾರ್ಥಿಗಳಿಗೆ Breathing exercise ಮೂಲಕ relaxation techniques ಅಭ್ಯಾಸ ಮಾಡಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಪ್ರಶಿಕ್ಷಣಾರ್ಥಿಗಳಿಗೆ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಬಗ್ಗೆ ಜಾಗೃತಿ ಕರಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.
