Saturday, April 19, 2025
Google search engine

Homeಸಿನಿಮಾಬೆಟ್ಟದಲ್ಲಿ “ಜೀನಿಯಸ್ ಮುತ್ತ”ನ ಪಯಣ

ಬೆಟ್ಟದಲ್ಲಿ “ಜೀನಿಯಸ್ ಮುತ್ತ”ನ ಪಯಣ

ಯಳಂದೂರು:ತಾಲೂಕಿನ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿರುವ ಶಾಲೆಯ ಕ್ಯಾಂಪಸ್‌ನಲ್ಲಿ ನಾಗಿಣಿಭರಣ ನಿರ್ದೇಶನದ ವಿಜಯ್ ರಾಘವೇಂದ್ರ, ಗಿರಿಜಾಲೋಕೇಶ್, ಪದ್ಮಾವಾಸಂತಿ, ಸುಂದರ್‌ರಾಜ್, ಮಾಸ್ಟರ್ ಶ್ರೇಯಸ್ ತಾರಾಗಣದ “ಜೀನಿಯಸ್ ಮುತ್ತ” ಚಿತ್ರದ ಚಿತ್ರೀಕರಣ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ.
ಮಂಗಳವಾರ ಹಾಗೂ ಬುಧವಾರ ಇಲ್ಲಿ ಚಿತ್ರದ ಅನೇಕ ದೃಶ್ಯಗಳನ್ನು ಈ ಚಿತ್ರದ ಚಿತ್ರೀಕರಣದ ತಂಡ ನಡೆಸಿದೆ. ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಕೂಡ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಇದೊಂದು ಮಕ್ಕಳ ಚಿತ್ರವಾಗಿದ್ದು,ಇದಕ್ಕೆ ಲತಾ ಜಯಪ್ರಕಾಶ್ ನಿರ್ಮಾಪಕರಾಗಿದ್ದಾರೆ. ರಾಷ್ಟ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಬಾಪುಪದ್ಮನಾಭ್ ರವರ ಸಂಗೀತ ನಿರ್ದೇಶನ ಇದರಲ್ಲಿ ಇರಲಿದ್ದು ಸಂಗೀತಕಟ್ಟಿ, ಮಂಜುಳಾ ಗುರುರಾಜ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರಕ್ಕೆ ಹಾಡನ್ನು ಹಾಡಲಿದ್ದಾರೆ. ಅಲ್ಲದೆ ಸ್ಥಳೀಯ ಸೋಲಿಗರ ಗೊರುಕನ ಹಾಡು ಹಾಗೂ ನೃತ್ಯವನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ ಎಂದು ನಿರ್ದೇಶಕಿ ನಾಗಿಣಿಭರಣ ಮಾಹಿತಿ ನೀಡಿದರು. ಈ ಚಿತ್ರ ಗ್ರಾಮೀಣ ಭಾಗದ ವಿದ್ಯಾರ್ಥಿಯ ಸಾಧನೆಯನ್ನು ಬಿಂಬಿಸುವ ಕಥಾವಸ್ತುವನ್ನು ಹೊಂದಿದೆ. ಡಿಸೆಂಬರ್ ವೇಳೆಗೆ ಸೆನ್ಸಾರ್‌ಗೆ ಹೋಗಲಿದೆ. ಬಹುತೇಕ ಚಿತ್ರೀಕರಣವನ್ನು ಮುಗಿಸಲಾಗಿದೆ. ಇದರ ಬಗ್ಗೆ ಶಿಕ್ಷಣ ಸಚಿವರಿಗೆ ಈ ಚಿತ್ರವನ್ನು ತೋರಿಸಿ ಪ್ರತಿ ಶಾಲೆಯ ಮಕ್ಕಳೂ ಇದನ್ನು ನೋಡುವಂತೆ ರಿಯಾಯ್ತಿ ದರದಲ್ಲಿ ಟಿಕೆಟ್ ಕೊಡಿಸಲು ಯೋಚನೆ ಮಾಡಿದ್ದೇನೆ. ಇದೊಂದು ಉತ್ತಮ ಚಿತ್ರವಾಗಿ ಮೂಡಿಬರಲಿದ್ದು ಕರುನಾಡಿನ ಪ್ರೇಕ್ಷಕರು ಇದನ್ನು ಪುರಸ್ಕರಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಮಾಹಿತಿ ನೀಡಿದರು.
ಪತ್ನಿ ಸಾವಿನ ನಂತರ ಬಣ್ಣ ಹಚ್ಚಿದ ಚಿನ್ನಾರಿಮುತ್ತ: ಚಿತ್ರದ ನಟ ಚಿನ್ನಾರಿಮುತ್ತ ಖ್ಯಾತಿಯ ವಿಜಯರಾಘವೇಂದ್ರ ರವರು ತಮ್ಮ ಪತ್ನಿ ಸ್ಪಂದನ ಆಗಸ್ಟ್ ತಿಂಗಳಲ್ಲಿ ಮರಣ ಹೊಂದಿದ ನಂತರ ಚಲನ ಚಿತ್ರಕ್ಕೆ ಬಣ್ಣ ಹಚ್ಚಿದ್ದು ಲವಲವಿಕೆಯಿಂದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಲ್ಲದೆ ಇಲ್ಲಿನ ಸೋಲಿಗರ ನೃತ್ಯ, ಇಲ್ಲಿನ ಸಂಸ್ಕೃತಿ, ಪರಿಸರವನ್ನು ಆಸ್ವಾದಿಸಿದರು. ಅಲ್ಲದೆ ಬಿಳಿಗಿರಿರಂಗನಾಥಸ್ವಾಮಿಯ ದರ್ಶನವನ್ನು ಪಡೆದರು. ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಇವರ ಬಂಧುಗಳಿದ್ದು ಇವರೂ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಿರ್ದೇಶಕ ಟಿ.ಎಸ್. ನಾಗಾಭರಣ ಚಿತ್ರನಟ ವಿಜಯರಾಘವೇಂದ್ರರನ್ನು ಅಭಿನಂದಿಸಲಾಯಿತು.
ವಿಜಿಕೆಕೆಯ ಸಂಸ್ಥಾಪಕ ಡಾ. ಸುದರ್ಶನ್, ಮುಖ್ಯಶಿಕ್ಷಕ ಸುಂದರೇಶ್, ನಾಗೇಶ್, ಮಂಜುನಾಥ್, ಕರವೇ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಗೌಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರವಿ ಡಿ.ಪಿ. ಮಹೇಶ್, ಫೈರೋಜ್‌ಖಾನ್ ಸೇರಿದಂತೆ ಅನೇಕರು ಇದ್ದರು.

RELATED ARTICLES
- Advertisment -
Google search engine

Most Popular