ಮೈಸೂರು: ವಿಜಯ ದಶಮಿ ಸಂಭ್ರಮಕ್ಕೆ ಅರಮನೆ ನಗರಿ ಸಜ್ಜಾಗ್ತಿದೆ. ಅರಮನೆ ಸೇರಿದಂತೆ ನಗರದ ವಿವಿಧೆಡೆ ಸಿದ್ಧತಾ ಕಾರ್ಯಗಳು ಚುರುಕು ಪಡೆದುಕೊಂಡಿವೆ. ಮೈಸೂರು ಅಂಬಾ ವಿಲಾಸ ಅರಮನೆಗೆ ಹಾಗೂ ಸುತ್ತಿನ ಭದ್ರಕೋಟೆಗೂ ಸುಣ್ಣಬಣ್ಣ ಬಳಿದು ಸಿಂಗಾರಗೊಳಿಸಲಾಗುತ್ತಿದೆ.
ವಿದ್ಯುತ್ ದೀಪಗಳ ಅಳವಡಿಕೆ: ಜೊತೆಗೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಬಿರುಸಿನಿಂದ ಸಾಗಿದೆ. ಬರದ ಕರಿನೆರಳಿನಲ್ಲಿ ಸರಳವೂ ಅಲ್ಲ. ಅದ್ಧೂರಿಯೂ ಅಲ್ಲ. ಸಾಂಪ್ರದಾಯಿಕ ದಸರಾಗೆ ಸಾಂಸ್ಕೃತಿಕ ನಗರಿ ಅಣಿಯಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಸುಸ್ವಾಗತಕ್ಕೆ ಐಇಆ ಬಲ್ಬ್‌ಗಳ ಅಳವಡಿಕೆ ಆರಂಭವಾಗಿದೆ. ಈ ಬಾರಿ ಸುಸ್ವಾಗತ ಜೊತೆ ಅಂಬಾರಿ ಮಾದರಿ ದೀಪಾಲಂಕಾರದ ಮಾಡಲಾಗಿದೆ. ಮೈಸೂರಿಗೆ ಪ್ರವಾಸಿಗರನ್ನು ಆಕರ್ಷಿಸಲು ಬಣ್ಣ ಬಣ್ಣದ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ದಸರಾದಿಂದ ನವೆಂಬರ್ ೧ರವರೆಗೂ ದೀಪಾಲಂಕಾರದ ವ್ಯವಸ್ಥೆ ಇರಲಿದೆ. ದಸರಾ ಮಹೋತ್ಸವದ ವೇಳೆ ದೀಪಾಲಂಕಾರಕ್ಕಾಗಿ ಸೆಸ್ಕ್ ನಿಂದ ಒಟ್ಟು ೬.೦೩ ಕೋಟಿ ರೂಪಾಯಿಗಳ ಟೆಂಡರ್ ಪಕ್ರಿಯೆ ನಡೆಸಲಾಗಿದ್ದು, ಸಯ್ಯಾಜಿರಾವ್ ರಸ್ತೆ, ಬಿಎನ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್ಬಿ ರಸ್ತೆ, ಚಾಮರಾಜ ಜೋಡಿ ರಸ್ತೆ ಸೇರಿದಂತೆ ಹೊರ ವಲಯದಲ್ಲಿನ ಪ್ರಮುಖ ಹೆದ್ದಾರಿಗಳನ್ನು ಸೇರಿಸಿಕೊಂಡು ೧೩೫ ಕಿ.ಮೀ. ಉದ್ದದ ರಸ್ತೆಗೆ ದೀಪಾಲಂಕಾರ ಮಾಡಲಾಗುತ್ತಿದೆ.
ಅರಮನೆ ಕಟ್ಟಡಕ್ಕೆ ಶಾಶ್ವತವಾಗಿ ಮಾಡಿರುವ ದೀಪಾಲಂಕಾರದ ಹಾಳಾಗಿದ್ದ ೨೪.೫ ಸಾವಿರ ಬಲ್ಬ್ ಬದಲಿಸುವ ಕಾರ್ಯದಲ್ಲಿ ೧೫ ದಿನದಿಂದ ಅರಮನೆ ಸಿಬ್ಬಂದಿ ಒಳಗೊಂಡಂತೆ ಎಲೆಕ್ಟ್ರಿಷಿಯನ್‌ಗಳು ತೊಡಗಿದ್ದಾರೆ. ಅರಮನೆ ಮುಖ್ಯ ಕಟ್ಟಡ, ಪ್ರವೇಶದ್ವಾರ, ವಿವಿಧ ಗೋಡೆ ಮೇಲೆ ಅಳವಡಿಸಿರುವುದೂ ಸೇರಿ ಒಟ್ಟು ೧ ಲಕ್ಷ ಬಲ್ಬ್ ಬೆಳಕು ಝಗಮಗಿಸಿ ಅರಮನೆ ಸೌಂದರ್ಯ ವೃದ್ಧಿಸುತ್ತದೆ. ಆದರೆ, ಪ್ರತಿದಿನ ಪಾರಿವಾಳಗಳು ಹಾರಾಡುವಾಗ, ಜೋರಾಗಿ ಗಾಳಿ ಬೀಸಿದಾಗ, ದೀಪಾಲಂಕಾರದ ವೇಳೆ ಮಳೆ ಬಂದಾಗ ಕೆಲವು ಬಲ್ಬ್‌ಗಳು ಸಿಡಿದುಹೋಗುತ್ತವೆ. ಇದರಿಂದ ಪ್ರತಿ ವರ್ಷ ದಸರಾ ವೇಳೆ ೧೫ ರಿಂದ ೨೦ ಸಾವಿರ ಬಲ್ಬ್ ಹಾನಿಗೀಡಾಗುತ್ತವೆ.
ಹೀಗಾಗಿ, ದೀಪಗಳ ಸಾಲು ಪರಿಶೀಲಿಸಿ ಕೆಟ್ಟಿರುವ ಬಲ್ಬ್ ಗುರುತಿಸಲಾಗಿತ್ತು. ಇದಕ್ಕಾಗಿ ದೆಹಲಿ, ಕೋಲ್ಕತ್ತದಲ್ಲಿ ವಿಶೇಷವಾಗಿ ತಯಾರಾಗುವ ಬಲ್ಬ್ ತರಿಸಲಾಗಿದೆ. ಆದರೆ, ಈ ಬಾರಿ ಕೊಂಚ ಹೆಚ್ಚಾಗಿ ಬಲ್ಬ್ ಹಾಳಾಗಿದ್ದು, ಅವುಗಳನ್ನು ಬದಲಾಯಿಸಲಾಗುತ್ತಿದೆ. ದೇಶದೆಲ್ಲಡೆ ಎಲ್‌ಇಡಿ ದೀಪ ಹೆಚ್ಚಾಗಿದ್ದರೂ ಪಾರಂಪರಿಕ ಸೌಂದರ್ಯ ಕಾಯ್ದುಕೊಳ್ಳಲು ಮೈಸೂರು ಅರಮನೆಗೆ ಇಂದಿಗೂ ಸಾಮಾನ್ಯ ಬಲ್ಬ್‌ಗಳನ್ನೇ ಬಳಸಲಾಗುತ್ತಿದೆ. ಸ್ವರ್ಣ ಬಣ್ಣದಿಂದ ಬೆಳಗಲಿರುವ ಈ ಬಲ್ಬ್‌ಗಳು ಅರಮನೆ ಅಂದಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.
ಅಭಿಮನ್ಯುವಿಗೆ ಮರದ ಅಂಬಾರಿ ತಾಲೀಮು: ಈಗಾಗಲೇ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು, ಭೀಮಾ, ಮಹೇಂದ್ರ, ಧನಂಜಯ ಹಾಗೂ ಗೋಪಿ ಆನೆಗೆ ೫೦೦ ರಿಂದ ೫೫೦ ಕೆ.ಜಿ ಭಾರ ಹೊರಿಸಿ ತಾಲೀಮು ನಡೆಸಲಾಗಿದೆ. ಇದೀಗ ಶೇ.೭೫ ಭಾರ ಹೊರುವ ತಾಲೀಮನ್ನು ಅಭಿಮನ್ಯು, ಮಹೇಂದ್ರ ಹಾಗೂ ಧನಂಜಯನಿಗೆ ನಡೆಸಲಾಗಿದೆ. ೪-೫ ದಿನಗಳಲ್ಲಿ ಅಭಿಮನ್ಯು ನೇತೃತ್ವದ ಗಜಪಡೆ ಮರದ ಅಂಬಾರಿ ಹೊರುವ ತಾಲೀಮು ಆರಂಭಿಸಲಿದೆ. ಮೊದಲ ದಿನ ಅಂಬಾರಿ ಆನೆ ಅಭಿಮನ್ಯು ಮರಳಿನ ಮೂಟೆ ಸೇರಿ ೮೫೦ಕ್ಕೂ ಹೆಚ್ಚು ಕೆ.ಜಿ. ಭಾರದ ಮರದ ಅಂಬಾರಿ ಹೊರುವ ಮೂಲಕ ತಾಲೀಮು ನಡೆಸಲಿದ್ದಾನೆ. ಬಳಿಕ ಮಹೇಂದ್ರ, ಧನಂಜಯ ಆನೆ ಒಂದೊಂದು ದಿನ ಮರದ ಅಂಬಾರಿ ಹೊರುವ ತಾಲೀಮು ನಡೆಸಲಿವೆ.
ಕುಶಲತೋಪು ತಾಲೀಮಿಗೆ ಸಿದ್ಧತೆ: ಗಜಪಡೆ ೩ ಹಂತದ ಕುಶಾಲುತೋಪಿನ ತಾಲೀಮಿಗೆ ಅಣಿಯಾಗಿವೆ. ಈ ವಾರ ಮೊದಲ ಹಂತದ ಕುಶಾಲತೋಪು ತಾಲೀಮು ವಸ್ತುಪ್ರದರ್ಶನ ಆವರಣದಲ್ಲಿ ನಡೆಯಲಿದೆ. ೭ ಫಿರಂಗಿಗಳಿಂದ ತಲಾ ೩ ಸುತ್ತಿನಂತೆ ಒಟ್ಟು ೨೧ ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಮೊದಲ ಹಂತದಲ್ಲಿ ಆನೆಗಳ ಕಾಲುಗಳನ್ನು ಸರಪಳಿಯಿಂದ ಕಟ್ಟಲಾಗುತ್ತದೆ. ವಿಜಯದಶಮಿಯಂದು ಅರಮನೆ ಬಳಿ ಪೊಲೀಸರು ೨೧ ಬಾರಿ ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸುತ್ತಾರೆ. ಆ ಸದ್ದಿಗೆ ಆನೆ, ಕುದುರೆ ಬೆದರದೆ, ವಿಚಲಿತಗೊಳ್ಳದೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ದಸರಾ ಆರಂಭಕ್ಕೂ ಮುನ್ನ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗುತ್ತದೆ.
ಜಂಬೂಸವಾರಿಗೆ ಗಜಪಡೆ ಸಿದ್ಧವಾಗುತ್ತಿದೆ. ಆನೆಗಳಿಗೆ ಮರದ ಅಂಬಾರಿ ಮತ್ತು ಕುಶಲತೋಪು ಸಿಡಿಸುವ ತಾಲೀಮನ್ನು ಈ ವಾರ ಆರಂಭಿಸಲಾಗುತ್ತದೆ. ೩ ಹಂತದಲ್ಲಿ ಕುಶಾಲತೋಪು ತಾಲೀಮು ನಡೆಯಲಿದೆ. ಅಭಿಮನ್ಯು ನೇತೃತ್ವದ ಗಜ ಪಡೆ ೭೦೦ ರಿಂದ ೭೫೦ ಕೆ.ಜಿ.(ಶೇ.೭೫ರಷ್ಟು) ಭಾರ ಹೊರುವ ತಾಲೀಮು ನಡೆಸುತ್ತಿದೆ. -ಸೌರಭ್ ಕುಮಾರ್, ಡಿಸಿಎಫ್