ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಡಿ.ಬಿ ಸುನಿಲ್ ಕುಮಾರ್ ಗೆ ಪ್ರತಿಭಟನಾಕಾರರಿಂದ ಮನವಿ
ಪಿರಿಯಾಪಟ್ಟಣ: ವಸತಿ ಯೋಜನೆಯಡಿ ಮನೆ ಕಟ್ಟಡದವರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ಬಿಲ್ ಪಾವತಿಸಿರುವ ತಾಲ್ಲೂಕಿನ ಚಿಕ್ಕನೇರಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎನ್ ಮಂಜುನಾಥ್
ಅವರನ್ನು ಕೊಡಲೇ ಕರ್ತವ್ಯದಿಂದ ಅಮಾನತುಮಾಡಿ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಚಿಕ್ಕನೇರಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಹಲವು ಅಕ್ರಮಗಳನ್ನು ಪಿಡಿಓ ಕೆ.ಎನ್ ಮಂಜುನಾಥ್ ಎಸಗಿದ್ದು ಸರ್ಕಾರದಿಂದ ಮಂಜೂರಾದ ಹಣವನ್ನು ಮನೆ ಕಟ್ಟದವರ ಹೆಸರಿಗೆ ವರ್ಗಾವಣೆ ಮಾಡಿರುತ್ತಾರೆ, ಪರಿಶಿಷ್ಟ ಜನಾಂಗಕ್ಕೆ ಸೇರಿದ ಜವರಮ್ಮ ಎಂಬುವವರ ಹೆಸರಿನಲ್ಲಿ ಮಂಜೂರಾಗಿದ್ದ ಬಿಲ್ ಹಣವನ್ನು ಚಂದ್ರೇಗೌಡ ಎಂಬುವವರ ಖಾತೆಗೆ ಅಕ್ರಮವಾಗಿ ವರ್ಗಾವಣೆ ಮಾಡಿ ಒಂದೇ ವಸತಿ ಯೋಜನೆಯಡಿ ಇಬ್ಬರು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಿ ಪರಿಶಿಷ್ಟ ಜನಾಂಗಕ್ಕೆ ಸೇರಿದ ಮಹಿಳೆಗೆ ಅನ್ಯಾಯ ಎಸಗಿದ್ದಾರೆ ಆದ್ದರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮೇಲೆ ಎಸ್ಸಿ ಎಸ್ಟಿ ಪ್ರತಿಬಂಧಕಾಜ್ಞೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅವರ ಅವಧಿಯಲ್ಲಿ ಜಿಪಿಎಸ್ ಮಾಡಿರುವ ಪ್ರಕೃತಿ ವಿಕೋಪದಡಿ ಮನೆ ಹಾನಿಗೆ ಸಂಬಂಧಿಸಿದಂತೆ ಮಂಜೂರಾದ ಹಣದ ವಿವರದ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿ ಮೇಲೆ ಪ್ರಕರಣ ದಾಖಲಿಸುವಂತೆ ದಲಿತ ಸಂಘರ್ಷ ಸಮಿತಿ ಮುಖಂಡರಾದ ದೊಡ್ಡಯ್ಯ, ಚಾಮರಾಯನ ಕೋಟೆ ಜಗದೀಶ್, ಆರ್.ಎಸ್ ದೊಡ್ಡಣ್ಣ ಒತ್ತಾಯಿಸಿದರು.
ಮನವಿ ಸ್ವೀಕಾರ: ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಡಿ.ಬಿ ಸುನಿಲ್ ಕುಮಾರ್ ಪ್ರತಿಭಟನಾಕಾರರಿಂದ ಮನವಿ ಪಡೆದು ಸ್ಥಳ ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಲಾಗುವುದು, ಪಿಡಿಒ ವಿರುದ್ಧ ಮಾಡಿರುವ ಆರೋಪ ಸಾಬೀತದಲ್ಲಿ ಅವರ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಒ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಧರಣಿ ಅಂತ್ಯಗೊಳಿಸಿದರು. ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ರಾಜಯ್ಯ, ಕಾಳಯ್ಯ, ವೆಂಕಟಯ್ಯ, ಶಿವಣ್ಣ, ವಿಜಯ್ ಹಾಗು ದಲಿತ ಸಂಘಟನೆ ಕಾರ್ಯಕರ್ತರು ಇದ್ದರು.
