ಏಷ್ಯನ್ ಗೇಮ್ಸ್ ನ 14 ನೇ ದಿನವನ್ನು ಭಾರತವು ಅತ್ಯುತ್ತಮವಾಗಿ ಆರಂಭಿಸಿದೆ. ಬಿಲ್ಲುಗಾರಿಕೆಯಲ್ಲಿ ಭಾರತ ನಾಲ್ಕು ಪದಕಗಳನ್ನು ಬಾಚಿಕೊಂಡ ಬೆನ್ನಲ್ಲೇ ಇದೀಗ ಮಹಿಳೆಯರ ಕಬಡ್ಡಿಯಲ್ಲಿ ಭಾರತಕ್ಕೆ ಚಿನ್ನಲಭಿಸಿದೆ. ಇದರ ಮೂಲಕ ಭಾರತ ಏಷ್ಯನ್ ಗೇಮ್ಸ್ ನಲ್ಲಿ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಏಷ್ಯನ್ ಗೇಮ್ಸ್ ನಲ್ಲಿ ಇದುವರೆಗೆ ಭಾರತ 100 ಪದಕಗಳನ್ನು ಬಾಚಿಕೊಂಡಿರಲಿಲ್ಲ. 2018 ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ನಲ್ಲಿ ದಾಖಲೆಯ 70 ಪದಕಗಳನ್ನು ಗೆದ್ದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ತನ್ನ ಎಲ್ಲ ಹಳೆಯ ದಾಖಲೆ ಪುಡಿಗಟ್ಟಿ ಇತಿಹಾಸ ನಿರ್ಮಿಸಿದೆ.
ಇಂದು ದಿನದ ಆರಂಭದಲ್ಲಿ ಜ್ಯೋತಿ ವೆನ್ನಮ್ ಅವರು ಮಹಿಳೆಯರ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅಂತೆಯೆ ಅದಿತಿ ಸ್ವಾಮಿ ಅವರು ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಜ್ಯೋತಿ ಅವರ ಮೂರನೇ ಚಿನ್ನದ ಪದಕವಾಗಿದೆ. ಈ ಹಿಂದೆ ಮಹಿಳಾ ಕಾಂಪೌಂಡ್ ಮತ್ತು ಮಿಶ್ರ ಸಂಯುಕ್ತ ತಂಡಗಳ ಈವೆಂಟ್ ಗಳಲ್ಲಿ ಪದಕ ಬಾಚಿಕೊಂಡಿದ್ದಾರೆ.
ಅಂತೆಯೆ ಓಜಸ್ ಪ್ರವೀಣ್ 2023 ರ ಏಷ್ಯನ್ ಗೇಮ್ಸ್ ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದರು. ಅಭಿಷೇಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಜ್ಯೋತಿ ತನ್ನ ಮೊದಲ ಪ್ರಯತ್ನದಲ್ಲಿ ಒಂಬತ್ತು ರನ್ ಬಾರಿಸಿದ ನಂತರ ಕೊರಿಯಾದ ಚೈವಾನ್ ಸೋ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. ಅಂತಿಮವಾಗಿ 149-145 ಅಂಕಗಳೊಂದಿಗೆ ಗೆದ್ದುಕೊಂಡರು
ಇದಕ್ಕೂ ಮುನ್ನ ಮಹಿಳೆಯರ ಕಾಂಪೌಂಡ್ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ಝಿಲಿಜಾಟಿ ಫಧ್ಲಿ ವಿರುದ್ಧ ಅದಿತಿ ಕಂಚಿನ ಪದಕ ಗೆದ್ದಿದ್ದರು. ಅಂತಿಮ ಎರಡು ಪಂದ್ಯಗಳು ಕ್ರಮವಾಗಿ 30 ಮತ್ತು 29 ಸ್ಕೋರ್ಗಳೊಂದಿಗೆ ಕೊನೆಗೊಂಡು ಅದಿತಿ 146-140 ಅಂಕಗಳೊಂದಿಗೆ ಸ್ಪರ್ಧೆಯಲ್ಲಿ ಜಯಗಳಿಸಿದರು.
ಇನ್ನು ಭಾರತಕ್ಕೆ ನೂರನೇ ಪದಕ ಬಂದಿದ್ದು ಮಹಿಳೆಯರ ಕಬಡ್ಡಿಯಿಂದ. ಈ ರಣರೋಚಕ ಪಂದ್ಯದಲ್ಲಿ ಭಾರತ 26-25 ಅಂಕಗಳಿಂದ ಚೈನೀಸ್ ತೈಪೆಯನ್ನು ಸೋಲಿಸಿ ಚಿನ್ನವನ್ನು ಗೆದ್ದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿತು. 2018 ರ ಆವೃತ್ತಿಯಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದ ಭಾರತೀಯ ಮಹಿಳಾ ಕಬಡ್ಡಿ ತಂಡವು ಇದೀಗ ಚಿನ್ನದ ಪದಕವನ್ನು ಪಡೆದರು.
ಭಾರತ ವನಿತೆಯರ ತಂಡ ಮೊದಲಾರ್ಧದಲ್ಲಿ 5 ಅಂಕಗಳ ಮುನ್ನಡೆ ಸಾಧಿಸಿತು (14-9). ಚೈನೀಸ್ ತೈಪೆ ಪಂದ್ಯದ ದ್ವಿತೀಯಾರ್ಧದಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ ಪರಿಣಾಮ ಪಂದ್ಯ ಕೊನೆಯವರೆಗೂ ತುದಿಗಾಲಿನಲ್ಲಿ ನಿಲ್ಲಿಸಿತ್ತು. ತೈಪೆ ತಂಡವು ಒಂದು ಹಂತದಲ್ಲಿ ಎಲ್ಲಾ ಭಾರತೀಯ ಆಟಗಾರರನ್ನು ಅಂಗಳದಿಂದ ಹೊರಗಟ್ಟಿ 2 ಹೆಚ್ಚುವರಿ ಅಂಕಗಳನ್ನು ಗೆದ್ದಿತು. ಆದಾಗ್ಯೂ, ಕೊನೇ ಕ್ಷಣದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿ 26-25 ರಿಂದ ಗೆದ್ದಿತು. ಇದರೊಂದಿಗೆ ಭಾರತ 25 ಚಿನ್ನದ ಪದಕ ಗೆದ್ದಿದೆ. ಭಾರತದ ಕೈಯಲ್ಲಿ ಒಟ್ಟು 25 ಚಿನ್ನ, 35 ಬೆಳ್ಳಿ ಮತ್ತು 40 ಕಂಚಿನ ಪದಕವಿದೆ.