ಬೆಂಗಳೂರು: ವಿಧಾನಸೌಧದ ಪೂರ್ವದ್ವಾರ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಬೆಳಗ್ಗೆ ೧೦ಗಂಟೆಗೆ ಸಂಸ್ಥೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ೧೦೦ ನೂತನ ಕರ್ನಾಟಕ ಸಾರಿಗೆ ಹಾಗೂ ೪೦ ಹವಾ ನಿಯಂತ್ರಣ ರಹಿತ ಸ್ಲೀಪರ್ ಐಷಾರಾಮಿ ಪಲ್ಲಕ್ಕಿ ಬಸ್ಸುಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ಕೆ.ಹೆಚ್. ಮುನಿಯಪ್ಪ, ಈಶ್ವರ ಖಂಡ್ರೆ, ದಿನೇಶ್ ಗುಂಡೂರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಅಂಬಾರಿ, ಐರಾವತ, ರಾಜಹಂಸ ಸೇರಿದಂತೆ ಇದೀಗ ಐಷಾರಾಮಿ ಪಲ್ಲಕ್ಕಿ ಎಂಬ ಹೊಸ ಬಸ್‌ಗಳು ರಸ್ತೆಗೆ ಇಳಿಯಲು ಸಜ್ಜಾಗಿವೆ. ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಬಸ್‌ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯ ಸರಕಾರ ಹೊಸ ಬಸ್‌ಗಳ ಖರೀದಿಗೆ ಮುಂದಾಗಿದೆ.
ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಸಹಿತ ರಾಜ್ಯದ ಬೇರೆ ಬೇರೆ ಊರುಗಳಿಗೆ ಸಂಚರಿಸಲಿವೆ. ಜೊತೆಗೆ ಹೊರರಾಜ್ಯಗಳ ಪಾಂಡಿಚೇರಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯ, ಕುಂಭಕೋಣಕ್ಕೆ ಪ್ರಯಾಣಿಸುವವರಿಗೂ ಪಲ್ಲಕ್ಕಿ ಬಸ್ ಸೌಲಭ್ಯ ಸಿಗಲಿದೆ.