ಧಾರವಾಡ: ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಾರಾಯಿ ಮಾರಾಟ ಅಡ್ಡಗಾಲು. ಸರ್ಕಾರ ಕೂಡ ಮದ್ಯದ ಅಂಗಡಿಯ ಕಡಿಮೆ ಮಾಡುವಂತಹ ಗಮನ ಹರಿಸಬೇಕು ಎಂದು ಸಚಿವ ಎಚ್. ಕೆ. ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯದ ಅಂಗಡಿ ವಿಚಾರವಾಗಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಆದರೆ ಆರೋಗ್ಯದ ಸಮಾಜ ನಿರ್ಮಾಣವಾಗಬೇಕಾದರೆ ಮದ್ಯದ ಅಂಗಡಿಗಳು ಕಡಿಮೆಯಾಗಬೇಕು. ಸಮಾಜದ ಮತ್ತು ಜನರ ಆರೋಗ್ಯಕ್ಕಿಂತ ಸರ್ಕಾರಕ್ಕೆ ಆದಾಯ ಮುಖ್ಯವಲ್ಲ ಎಂಬುದನ್ನು ನಾವು ಸೇರಿದಂತೆ ಎಲ್ಲರೂ ಅರಿಯಬೇಕು. ಸಾರಾಯಿ ಮಾರಾಟದಿಂದ ಆದಾಯ ಬರುತ್ತದೆ ಎಂಬ ಕಾರಣಕ್ಕೆ ಕುಡಿತವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಜಾತಿ ವಿಚಾರವಾಗಿ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯದವರು ಕೂಡ ಮತ ಹಾಕಿದ್ದಾರೆ. ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಭಾವಿಕವಾಗಿ ಲಿಂಗಾಯತರು ಮತ ಹಾಕಿದ್ದಾರೆ ಸಹಜ ಕೂಡ. ಡಿಸಿಎಂ ಸ್ಥಾನ ಕೊಡುವದು ಬಿಡುವುದು ಹೈಕಮಾಂಡಗೆ ಬಿಟ್ಟ ವಿಚಾರ. ಆದ್ದರಿಂದ ವಿನಾಕಾರಣ ಗೊಂದಲ ಉಂಟು ಮಾಡಬಾರದು. ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಜನಪ್ರಿಯತೆ ಹೆಚ್ಚಿದ್ದು ಬೇರೆ ಪಕ್ಷಗಳಿಗೆ ಹೊಟ್ಟೆ ಉರಿಯಾಗಿದೆ. ಹೀಗಾಗಿ ಗೊಂದಲ ಉಂಟು ಮಾಡುತ್ತಿದ್ದಾರೆ. ನಾನು ನನ್ನ ರಾಜಕೀಯ ಜೀವನದಲ್ಲಿ ಜಾತಿ ವಿಚಾರ ಇಟ್ಟುಕೊಂಡು ಬೆಳೆದವನು ಅಲ್ಲ, ಮಾತನಾಡಿದವನು ಅಲ್ಲ ಹೀಗಾಗಿ ಜಾತಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.