ಚಾಮರಾಜನಗರ: ಚಾಮರಾಜನಗರ ತಾಲೂಕಿನ ವೆಂಕಟಯ್ಯನಛತ್ರದಲ್ಲಿ ಇತ್ತೀಚೆಗೆ ನಡೆದ ಚಾಮರಾಜನಗರ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವೆಂಕಟಯ್ಯನಛತ್ರ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದಲ್ಲಿ 23 ವಿಭಾಗಗಳಲ್ಲಿ ಪ್ರಶಸ್ತಿಗಳಿಸಿರುವ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೂ ಸಮರ್ಪಕ ತಯಾರಿ ನಡೆಸಿದ್ದರ ಫಲವಾಗಿ ವಿದ್ಯಾರ್ಥಿಗಳಿಗೆ ಈ ಗೌರವ ಒಲಿದು ಬಂದಿದೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎಸ್. ನಾಗೇಶ ಅವರು ಎಲ್ಲಾ ವಿಜಯಶಾಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸುವುದರ ಜೊತೆಗೆ ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಭೂಗೋಳಶಾಸ್ತ್ರ ಉಪನ್ಯಾಸಕರಾದ ಮಹಾಂತೇಶ ಕುರುಬರ ಅವರ ಪ್ರೋತ್ಸಾಹ ಮತ್ತು ಶ್ರಮವನ್ನು ವಿಶೇಷವಾಗಿ ಪ್ರಶಂಶಿಸಿದರು. ಜಿಲ್ಲಾ ಮಟ್ಟದ ಮತ್ತು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಸಾಧನೆ ಮೂಡಿ ಬರಲಿ ಎಂದು ಶುಭ ಹಾರೈಸಿದರು.
ಉಪನ್ಯಾಸಕರಾದ ಮಲ್ಲೇಶ, ಎಸ್. ಪ್ರಶಾಂತ, ಮಹೇಶ್. ಆರ್, ಎ. ಪೂರ್ಣಿಮ, ಜೆ. ಅನಿತ, ವಿ. ಗೋವಿಂದ, ಎಸ್. ಶೀಲಾವತಿ, ಮಹಾಂತೇಶ ಕುರುಬರ ಹಾಗೂ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ವಿಜೇತ ವಿದ್ಯಾರ್ಥಿಗಳ ವಿವರ:- ತೇಜಸ್ 800 ಮೀ ಪ್ರಥಮ, 400ಮೀ ದ್ವಿತೀಯ, ಶೈಲಜ 100 ಮೀ ಪ್ರಥಮ, 200ಮೀ ತೃತೀಯ (ಕ್ರೀಡಾ ಕೂಟದ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದ್ದಾಳೆ), ಯೋಗೇಶ್ 5000 ಮೀ ಪ್ರಥಮ, 3000 ಮೀ. ದ್ವಿತೀಯ, ಶಿವು 3000 ಮೀ ಪ್ರಥಮ, ಜಯಲಕ್ಷ್ಮಿ 1500 ಮೀ ಪ್ರಥಮ, ಗೌರಮ್ಮ 800 ಮೀ ಪ್ರಥಮ, 400 ಮೀ ದ್ವಿತೀಯ, ರಾಧಿಕ 5000 ಮೀ ಪ್ರಥಮ, 3000 ಮೀ ದ್ವಿತೀಯ, ವೇಗ ನಡಿಗೆ ತೃತೀಯ, ಗಂಗಮ್ಮ 800 ಮೀ ದ್ವಿತೀಯ, 1500 ತೃತೀಯ, ನದಿಯ 5000 ಮೀ ದ್ವಿತೀಯ, 3000 ಮೀ ತೃತಿಯ, ರವಿಂದ್ರ ವೇಗ ನಡಿಗೆ ದ್ವಿತೀಯ, 5000 ಮೀ ತೃತೀಯ, ಮಾದೇಶ್ 100 ಮೀ ತೃತೀಯ, ಮದನ್ ಜಾವಲಿನ್ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 4 x 400 ಮೀ ರಿಲೆ ದ್ವಿತೀಯ, 7 ಸ್ಪರ್ಧೆಯಲ್ಲಿ ಪ್ರಥಮ, 9 ಸ್ಪರ್ಧೆಯಲ್ಲಿ ದ್ವಿತೀಯ, 7 ಸ್ಪರ್ಧೆಯಲ್ಲಿ ತೃತೀಯ ಹಾಗೂ ಕಬ್ಬಡ್ಡಿ ತಂಡ ಸೆಮಿಫೈನಲ್ ಗೆ ತಲುಪಿದೆ. 18 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.