ಹುಬ್ಬಳ್ಳಿ: ರಾಜ್ಯದಲ್ಲಿ ಬರ ಆವರಿಸಿದೆ ಬರ ಪರಿಹಾರವನ್ನು ನಾವು ಸಮರ್ಥವಾಗಿ ನೀಡುತ್ತೇವೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಬರೀ ಹೇಳಿಕೆಯಲ್ಲಿ ಇವರ ಸರ್ಕಾರ ಆಡಳಿತ ನಡಿತಾ ಇದೆ. ರಾಜ್ಯದಲ್ಲಿ ಬರಗಾಲ ಆವರಿಸಿ ಮೂರು ತಿಂಗಳಾಯಿತು. ಮುಂಗಾರು ಬೆಳೆ ನಾಶವಾಗಿ ರೈತರು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಸರ್ಕಾರ ಜೀವಂತ ಇದೆಯೋ ಇಲ್ಲವೋ ಎಂಬುವುದು ಇಂತಹ ಸಂಕಷ್ಟದಲ್ಲಿ ಗೊತ್ತಾಗುತ್ತೆ. ಈ ಸರ್ಕಾರ ರೈತರ ಪಾಲಿಗೆ ಜೀವಂತ ಇಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕುಡಿಯುವ ನೀರಿನ ಸಮಸ್ಯೆಗೆ ಇದುವರೆಗೂ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರಕ್ಕೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ನಿಮ್ಮ ಬಳಿ ವಿಕೋಪ ನಿಧಿ ಈಗಾಗಲೇ ಇದೆ. ಕೂಡಲೇ ಅದನ್ನು ಬಿಡುಗಡೆ ಮಾಡಿ. ಆಮೇಲೆ ಕೇಂದ್ರದಿಂದ ತೆಗೆದುಕೊಳ್ಳಿ, ನಾವು ನಿಮ್ಮ ಜೊತೆ ಇದ್ದೇವೆ. ನಮ್ಮ ಕಾಲದಲ್ಲಿ ಪ್ರವಾಹ ಬಂತು, ನಾವು ಕೇಂದ್ರಕ್ಕಾಗಿ ಕಾಯುತ್ತಾ ಕೂರಲಿಲ್ಲ. ಹೇಳಿಕೆಯಿಂದ ಬರಗಾಲ ಪರಿಹಾರ ಆಗೋದಿಲ್ಲ ಎಂದರು.