ಧಾರವಾಡ: ಶಿಕ್ಷಣ ಉದ್ಯೋಗ ಉದ್ಯಮ ಬೆಳೆದಂತೆ ಮಾದಕ ದ್ರವ್ಯಗಳು, ಅಫೀಮು ವಸ್ತುಗಳ ಜಾಲವು ಬೇರೆ ಬೇರೆ ಸ್ವರೂಪದಲ್ಲಿ ಸಮಾಜವನ್ನು ಆವರಿಸುತ್ತಿದೆ. ಇದನ್ನು ತಡೆಗಟ್ಟಿ ಸಮಾಜ, ಯುವ ಸಮೂಹವನ್ನು ರಕ್ಷಿಸಬೇಕಾದರೆ ಎಲ್ಲರ ಸಾಂಘೀಕ ಪ್ರಯತ್ನ ಮತ್ತು ಟೀಮ್ ವರ್ಕ್ ಮುಖ್ಯವಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಜಿ. ನರೇಂದರ್ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೋಲೀಸ್ ಇಲಾಖೆ ಹಾಗೂ ಧಾರವಾಡ ವಕೀಲರ ಸಂಘದ ಆಶ್ರಯದಲ್ಲಿ ವಿವಿಧ ಇಲಾಖೆಗಳಲ್ಲಿನ ಮಾದಕ ವಸ್ತು, ದ್ರವ್ಯ ಪ್ರಕರಣಗಳ ನಿರ್ವಾಹಕ ತನಿಖಾ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾದಕ ಔಷಧಿಗಳ ಮತ್ತು ಮನೋ ಪರಿಣಾಮಕ ವಸ್ತುಗಳ ಅಧಿನಿಯಮ-1985 ಕುರಿತ ಕಾನೂನು ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದರು.
ಅಪರಾಧ ಕೃತ್ಯಗಳ ತನಿಖೆ ಮಾಡಿದಾಗ ಮಾದಕ ವಸ್ತುಗಳ ಬಳಕೆ, ವ್ಯಸನ ಅಪರಾಧಿಯಲ್ಲಿ ಕಾಣಸಿಗುತ್ತದೆ, ಸರಿಯಾದ ರೀತಿಯಲ್ಲಿ ಸಾಕ್ಷ್ಯಗಳ ಸಂಗ್ರಹ, ಮಾದರಿಗಳ ಸಂಗ್ರಹ, ನಿಮಾನುಸಾರದ ಪ್ರಕರಣ ದಾಖಲು ಮಾಡುವುದರಿಂದ ಪ್ರಕರಣ ರುಜುವಾತು ಮಾಡಿ ಅಪರಾಧಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಯುವಕರು ವಿಶೇಷವಾಗಿ ವೃತ್ತಿಪರ ಕೋರ್ಸ್, ಉನ್ನತ ವ್ಯಾಸಂಗ ಮಾಡುವ ಹಲವಾರು ವಿದ್ಯಾರ್ಥಿ ಮಿತ್ರರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಹವ್ಯಾಸಕ್ಕಾಗಿ ಆರಂಭಿಸುವ ಮಾದಕ ವಸ್ತುಗಳ ಬಳಕೆ, ಪರಿಸ್ಥಿತಿ, ಆರ್ಥಿಕ ಅನುಕೂಲತೆ ಮೇರೆಗೆ ಅವರಿಗೆ ಪ್ರವೃತ್ತಿಯಾಗಿ ಅಂಟುತ್ತದೆ. ಅಂತಹವರು ಸಮಾಜಕ್ಕೆ ಕಳಂಕವಾಗಿ ರೂಪುಗೊಳ್ಳುತ್ತಾರೆ. ಯುವ ಸಮೂಹ ಇಂತಹ ಯಾವುದೇ ದಾಸ್ಯಕ್ಕೆ ಒಳಗಾಗದೇ ಸುಸಂಸ್ಕøತ ಸಮಾಜವಾಗಲೂ ಎಲ್ಲರೂ ಸೇರಿ ಪ್ರಯತ್ನಿಸಬೇಕೆಂದು ಹಿರಿಯ ನ್ಯಾಯಮೂರ್ತಿ ಜಿ.ನರೇಂದರ್ ಅವರು ತಿಳಿಸಿದರು.
ಮಾದಕ ದ್ರವ್ಯಗಳ ಸ್ವರೂಪ, ಸಾಗಾಣಿಕೆ ಮತ್ತು ಬಳಕೆದಾರರಲ್ಲಿ ವಿಭಿನ್ನತೆ ಇದೆ. ತನಿಖಾಧಿಕಾರಿಗಳು ಕಾಲಕಾಲಕ್ಕೆ ಮಾಹಿತಿ ಪಡೆದು ಇದರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮವಹಿಸಬೇಕೆಂದು ಅವರು ಹೇಳಿದರು. ತನಿಖಾಧಿಕಾರಿಗಳಿಗೆ ಇನ್ನಷ್ಟು ಕಾನೂನಾತ್ಮಕ ಮಾಹಿತಿ ಹಾಗೂ ಕೋರ್ಟ್ ಕಲಾಪಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಪ್ರತಿ ಪಾಲಕ, ಶಿಕ್ಷಕ, ಮಾಲೀಕ, ಸಂಬಂಧಿ, ಸಹಚರ ಎಲ್ಲರೂ ಸೇರಿ ಸಾಂಘೀಕವಾಗಿ ಪ್ರಯತ್ನಿಸಿದಾಗ ಮಾತ್ರ ನಾವು ಮಾದಕ ವಸ್ತು ಮುಕ್ತ ಸಮಾಜ ಕಾಣಲು ಸಾಧ್ಯವಾಗುತ್ತದೆ ಎಂದು ಹಿರಿಯ ನ್ಯಾಯಮೂರ್ತಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪೋಲೀಸ್ ಆಯುಕ್ತ ರೇಣುಕಾ ಸುಕುಮಾರ ಅವರು ಮಾತನಾಡಿ, ಮಾದಕ ವಸ್ತುಗಳ ಜಾಲ ಈಗ ದೊಡ್ಡದಾಗಿದೆ. ಅಂತ ಪ್ರಕರಣಗಳ ತನಿಖೆಯು ತನಿಖಾಧಿಕಾರಿಗಳಿಗೆ ಒಂದು ಚಾಲೆಂಜ್ ಆಗಿದೆ ಎಂದರು.
ತನಿಖಾಧಿಕಾರಿಗಳು ಮಾದಕವಸ್ತುಗಳ ಹಾಗೂ ಅದರ ನಿಯಂತ್ರಣ ಬಗ್ಗೆ ಮಾಹಿತಿಯುಕ್ತರಾದಾಗ ಮಾತ್ರ ಸಮರ್ಪಕವಾಗಿ ತನಿಖೆ ಮಾಡಿ, ಅಪರಾಧಿಗೆ ಶಿಕ್ಷೆಯನ್ನು ಕೊಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಾಗಾರದಲ್ಲಿ ಮಂಗಳೂರು ಉಪವಿಭಾಗದ ಅಬಕಾರಿ ಉಪ ಆಯುಕ್ತ ಸೈಯದ್ ತಫ್ಜೀಲ್ ಉಲ್ಲಾ ಹಾಗೂ ಕಾನೂನು ತಜ್ಞರು ಎನ್.ಡಿ.ಪಿ ಕಾಯ್ದೆ 1985 ಹಾಗೂ ತನಿಖಾಧಿಕಾರಿಗಳ ಪಾತ್ರ ಕುರಿತು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ನ್ಯಾಯಾಲಯದ ಎಲ್ಲ ನ್ಯಾಯಾಲಯಗಳ ನ್ಯಾಯಾಧೀಶರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ರಾಘವೇಂದ್ರ ಶೆಟ್ಟಿಗಾರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಗಪ್ಪ ಎನ್. ಗಾಬಿ, ಡಿವೈಎಸ್ಪಿಗಳಾದ ನಾಗರಾಜ ಎಸ್.ಎಂ, ಎಸ್.ಎಸ್. ಹಿರೇಮಠ, ಎಸಿಪಿ ಪ್ರಶಾಂತ ಸಿದ್ದನಗೌಡರ, ಪೋಲೀಸ್ ಇನ್ಸ್‍ಪೆಕ್ಟರ್‍ಗಳು, ಪೋಲೀಸ್ ಸಬ್‍ಇನ್ಸ್ಪೆಕ್ಟರ್‍ಗಳು ಸೇರಿದಂತೆ ಮಹಾನಗರ ಹಾಗೂ ಜಿಲ್ಲಾ ಗ್ರಾಮೀಣ ಪೋಲೀಸ್ ಇಲಾಖೆಯ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು, ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪ್ಯಾನಲ್ ವಕೀಲರು, ವಕೀಲರ ಸಂಘದ ಸದಸ್ಯರು, ಕಾನೂನು ಅಧಿಕಾರಿಗಳು, ಸರಕಾರಿ ವಕೀಲರು, ಭಾಗವಹಿಸಿದ್ದರು.
