ಪಿರಿಯಾಪಟ್ಟಣ: ಅ.13 ರಂದು ಮೈಸೂರಿನಲ್ಲಿ ನಡೆಯುವ ಮಹಿಷ ದಸರಾ ಆಚರಣೆಗೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದಲಿತ ಮುಖಂಡರಾದ ಐಲಾಪುರ ರಾಮು ಅವರು ಮಾತನಾಡಿ ಮಹಿಷ ದಸರಾ ಕಾರ್ಯಕ್ರಮ ತಡೆಯಲು ದಲಿತ ವಿರೋಧಿ ಮನುವಾದಿಗಳು ಹುನ್ನಾರ ನಡೆಸುತ್ತಿರುವುದಕ್ಕೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸುವ ಮೂಲಕ ತಕ್ಕ ಉತ್ತರ ನೀಡುತ್ತೇವೆ.
ಮಹಿಷ ದಸರಾ ಆಚರಣೆ ನಮ್ಮ ಹಕ್ಕು ಇದನ್ನು ಸರ್ಕಾರಿ ನಿಯಮದಂತೆ ಅನುಮತಿ ಪಡೆದು ಆಚರಣೆ ಮಾಡುತ್ತಿದ್ದರೆ ದಲಿತ ವಿರೋಧಿ ಮನುವಾದಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ ಅವರ ಬೆದರಿಕೆಗಳಿಗೆ ಜಗ್ಗುವ ಕುಗ್ಗುವ ಮನೋಭಾವನೆ ನಮ್ಮಲ್ಲಿಲ್ಲ, ನಾವು ಬೌದ್ಧ ಹಾಗೂ ಅಂಬೇಡ್ಕರ್ ಅನುಯಾಯಿಗಳು ಶಾಂತಿ ಮಾರ್ಗದಲ್ಲಿ ಸಾಗುತ್ತೇವೆ ರಾಜಕೀಯ ತೀಟೆಗಾಗಿ ದಲಿತ ವಿರೋಧಿ ಹೇಳಿಕೆ ನೀಡುತ್ತಾ ರೌಡಿಯಂತೆ ಸಂಸದ ಪ್ರತಾಪ್ ಸಿಂಹ ವರ್ತನೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದರು.
ದಲಿತ ಮುಖಂಡರಾದ ಸಿ.ತಮ್ಮಣ್ಣಯ್ಯ ಅವರು ಮಾತನಾಡಿ ಮಹಿಷ ದೊರೆಯಾದ್ದರಿಂದ ಮೈಸೂರು ಎಂಬ ಹೆಸರು ಬಂದಿದೆ ಇದು ಇತಿಹಾಸದಲ್ಲಿ ಉಲ್ಲೇಖವಾಗಿದೆ ಆದರೂ ಪಟ್ಟಬದ್ಧ ಹಿತ ಶಕ್ತಿಗಳು ಮಹಿಷನ ರಾಕ್ಷಸನಂತೆ ಬಿಂಬಿಸಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡದೆ ಅಡ್ಡಿಪಡಿಸುವ ಹೇಳಿಕೆ ನೀಡುತ್ತಿದ್ದಾರೆ ಅವರು ಬಾಯಿಗೆ ಬಂದಂತೆ ಮಾತನಾಡಿದರು ನಾವೆಲ್ಲರೂ ಸಂಘಟಿತರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ ಕೋಮುಗಲಭೆ ಸೃಷ್ಟಿಸುವಂತಹ ವರ್ತನೆ ತೋರುತ್ತಿರುವ ಸಂಸದ ಪ್ರತಾಪ್ ಸಿಂಹ ನಡೆ ನಾಚಿಕೆಗೇಡು ಎಂದರು.
ದಲಿತ ಮುಖಂಡರಾದ ಹೇಮಂತ್ ಕುಮಾರ್ ಮಾತನಾಡಿ ಆರ್ಯ ಹಾಗೂ ಬೌದ್ಧ ಧರ್ಮದ ನಡುವೆ ಸಂಘರ್ಷ ನಡೆಯುತ್ತಿದ್ದು ಆರ್ಯ ಧರ್ಮದ ಪರ ಸಂಸದ ಪ್ರತಾಪ್ ಸಿಂಹ ಇದ್ದರೆ ನಾವೆಲ್ಲರೂ ಬೌದ್ಧ ಧರ್ಮದ ಪರವಿದ್ದು ಶಾಂತಿ ಪ್ರಿಯರಾಗಿ ಸಂಘಟಿತರಾಗಿ ಹೋರಾಟದ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುತ್ತೇವೆ ಎಂದರು.
ದಲಿತ ಮುಖಂಡರಾದ ಪಿ.ಮಹದೇವ್ ಮತ್ತು ಈರಾಜ್ ಬಹುಜನ್ ಮಾತನಾಡಿ ಮಹಿಷ ದಸರಾ ಆಚರಣೆಗೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಮೂಲಕ ನಮ್ಮ ಸಂಘಟನೆಯ ಬಲ ತೋರಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ನಡೆಗೆ ಖಂಡನೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಮಹದೇವ್, ಭೀಮ್ ಆರ್ಮಿ ಸಂಘಟನೆಯ ಗಿರೀಶ್, ಮಹದೇವ್, ಚೌತಿ ಮಲ್ಲಣ್ಣ, ಪ್ರಕಾಶ್, ಅಂಬೇಡ್ಕರ್ ಮೂಲ ನಿವಾಸಿ ಸಂಘಟನೆಯ ಬೆಟ್ಟದತುಂಗ ರಾಜು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಿ.ಎಸ್ ಜಗದೀಶ್, ಬಿಎಸ್ ಪಿ ಯ ದೇವೇಂದ್ರ, ಅಂಬೇಡ್ಕರ್ ಸೇನೆಯ ರಾಜಣ್ಣ, ಮಾದಿಗ ಸಮನ್ವಯ ಸಮಿತಿಯ ಡಿ.ಕೆ ತಮ್ಮಯ್ಯ, ಜಗದೀಶ್, ಶಿವರಾಂ, ಆರ್ ಪಿಐ ಪಕ್ಷದ ಕೆ.ಬಿ ರಾಜು, ಮುಖಂಡರಾದ ಶಿವರಾಜ್, ರಾಜಯ್ಯ, ಸೋಮಶೇಖರ್, ಶಿವಣ್ಣ, ಆರ್.ಡಿ ಮಹದೇವ್, ಚನ್ನಬಸವ, ರಾಜಯ್ಯ, ಲೋಕೇಶ್, ಎನ್.ಈ ರಾಜು, ಚಿಕ್ಕಮಹದೇವ್, ರಮೇಶ್ ಇದ್ದರು.