ಬೆಂಗಳೂರು: ಅತ್ತಿಬೆಲೆಯಲ್ಲಿ ಘೋರ ದುರಂತ ಘಟಿಸಿದೆ. ಕಾನೂನು ಉಲ್ಲಂಘಿಸಿ ಪಟಾಕಿ ಶೇಖರಣೆ ಮಾಡಿಕೊಳ್ಳಲು ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು. ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದರು.
ಆರ್.ಟಿ.ನಗರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಹಾವೇರಿಯಲ್ಲೂ ಪಟಾಕಿ ದುರಂತ ಆಗಿತ್ತು. ಕಾನೂನಿನಲ್ಲಿ ಪಟಾಕಿಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಶೇಖರಣೆಗೆ ಅವಕಾಶ ಇಲ್ಲ. ಈ ಒಂದೂವರೆ ತಿಂಗಳಲ್ಲಿ ಎರಡನೇ ಪಟಾಕಿ ದುರಂತ ನಡೆದಿದೆ. ಈ ಮೊದಲು ಹಾವೇರಿಯಲ್ಲಿ ದುರಂತ ನಡೆದು ನಾಲ್ಕು ಜನ ಮೃತಪಟ್ಟಿದ್ದರು.
ಈಗ ಅತ್ತಿಬೆಲೆಯಲ್ಲಿ ೧೪ ಜನ ಮೃತಪಟ್ಟಿದ್ದಾರೆ ಅಂದರೆ ನಿಯಮಗಳ ಪಾಲನೆ ಆಗುತ್ತಿಲ್ಲ ಅಂತ ಗೊತ್ತಾಗುತ್ತದೆ. ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಬೇಕು. ಮೊದಲು ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತಗೊಂಡರೆ ಇಂತಹ ಘಟನೆಗಳು ನಿಲ್ಲುತ್ತವೆ ಎಂದು ಸಲಹೆ ನೀಡಿದರು.
ಅತ್ತಿಬೆಲೆ ಪಟಾಕಿ ದುರಂತಕ್ಕೆ ಸ್ಥಳೀಯ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ. ಹಣಕಾಸು ವ್ಯವಹಾರ ಮಾಡಿಕೊಂಡು ಅಕ್ರಮವಾಗಿ ಲೈಸನ್ಸ್ ಕೊಡೋದು, ಅಕ್ರಮ ಶೇಖರಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಇಷ್ಟು ದೊಡ್ಡ ದುರಂತ ಆಗಿದೆ. ಪಟಾಕಿ ನಿರ್ವಹಣೆಯ ನಿಯಮಗಳ ಪಾಲನೆ ಆಗುತ್ತಿಲ್ಲ. ಸರ್ಕಾರ ಕಣ್ತೆರೆಯದಿದ್ದರೆ ಇನ್ನಷ್ಟು ಘಟನೆಗಳು ನಡೆಯಲಿವೆ ಎಂದು ಎಚ್ಚರಿಸಿದರು.