ಅರಿಯಲೂರು ತಮಿಳುನಾಡು: ರಾಜೇಂದ್ರನ್ ಅವರು ಅರಿಯಲೂರು ಜಿಲ್ಲೆಯ ಪಟಾಕಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ೭ ಮಂದಿ ಸಾವನ್ನಪ್ಪಿರುವ ಘಟನೆ ಇಂದು ಸೋಮವಾರ ನಡೆದಿದೆ. ವೀರಕಲೂರು ಗ್ರಾಮದಲ್ಲಿ ಯಾಜ್ ಕ್ರ್ಯಾಕರ್ಸ್ ಎಂಬ ಅಂಗಡಿಯನ್ನು ನಡೆಸುತ್ತಿದ್ದು, ದೀಪಾವಳಿ ಸಮೀಪಿಸುತ್ತಿದ್ದಂತೆ ಸ್ಥಳೀಯ ಜನರೊಂದಿಗೆ ೩೫ಕ್ಕೂ ಹೆಚ್ಚು ಮಂದಿ ಹಾಗೂ ಶಿವಕಾಶಿಯ ಹತ್ತಕ್ಕೂ ಹೆಚ್ಚು ಮಂದಿ ಪಟಾಕಿ ತಯಾರಿಕೆಯಲ್ಲಿ ತೊಡಗಿದ್ದಾರೆ.
ಇಂದು ಬೆಳಿಗ್ಗೆ ೯:೩೦ರ ಸುಮಾರಿಗೆ ಪಟಾಕಿ ತಯಾರಿಸುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಈ ವೇಳೆ ಪಟಾಕಿಗಳಿಗೆ ಬೆಂಕಿ ವ್ಯಾಪಿಸಿ ಭಾರಿ ಶಬ್ಧದೊಂದಿಗೆ ಸ್ಫೋಟಗೊಂಡಿದೆ. ಪಟಾಕಿ ತಯಾರಿಕೆಯಲ್ಲಿ ನಿರತರಾಗಿದ್ದ ಜನರು ಬೆಂಕಿಗೆ ಆಹುತಿಯಾದರು.
ಅರಿಯಲೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಮೂರು ಅಗ್ನಿಶಾಮಕ ದಳಗಳು ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿವೆ. ಮೂರು ಗಂಟೆಗಳ ಕಾಲ ಬೆಂಕಿಯನ್ನು ಹತೋಟಿಗೆ ತರಲು ಶ್ರಮಿಸಿದ್ದಾರೆ. ಅಪಘಾತದಲ್ಲಿ ಮಹಿಳೆ ಸೇರಿದಂತೆ ೭ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ೬ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಹಾನಿ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.