ಮೈಸೂರು: ಮಹೋತ್ಸವಕ್ಕೆ ಸಕಲ ಸಿದ್ಧತೆ ಜೋರಾಗಿ ನಡೆದಿದೆ. ಈ ಬಾರಿ ಅರ್ಥಪೂರ್ಣ ಹಾಗೂ ಸಾಂಪ್ರದಾಯಿಕ ದಸರೆಗೆ ಸರ್ಕಾರ ಹೆಚ್ಚು ಒತ್ತು ಕೊಟ್ಟಿದೆ. ಅ. ೨೪ರ ವಿಜಯ ದಶಮಿಯಂದು ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಗಜಪಡೆಯ ಜಂಬೂಸವಾರಿಯ ಪ್ರಮುಖ ಆಕರ್ಷಣೆ ಸ್ತಬ್ಧಚಿತ್ರಗಳು ಈ ಬಾರಿಯೂ ದಸರಾ ಜಂಬೂಸವಾರಿಗೆ ಮೆರುಗು ನೀಡಲು ೩೬ ಸ್ತಬ್ಧಚಿತ್ರಗಳು ಸಿದ್ದವಾಗಲಿವೆ.
ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಸಾಗುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಇದರ ಜೊತೆ ಸ್ತಬ್ಧಚಿತ್ರಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿವೆ. ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗಿನ ರಾಜಪಥದಲ್ಲಿ ಸಾಗುವ ಮೆರವಣಿಗೆಯಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಸೇರಿದಂತೆ ರಾಜ್ಯದ ೩೧ ಜಿಲ್ಲಾ ಪಂಚಾಯತ್‌ಗಳು, ವಿವಿಧ ಇಲಾಖೆಯ ೫ ಸ್ತಬ್ದ ಚಿತ್ರಗಳೂ ಸೇರಿ ಒಟ್ಟು ೩೬ ಸ್ತಬ್ಧಚಿತ್ರಗಳು ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ.
ನಾಳೆ ಅ. ೧೦ರಿಂದ ಮೈಸೂರು-ನಂಜನಗೂಡು ರಸ್ತೆಯ ಬಂಡಿಪಾಳ್ಯದ ಆವರಣದಲ್ಲಿ ಆರಂಭವಾಗಲಿದೆ. ರಾಜ್ಯದ ಎಲ್ಲ ೩೧ ಜಿಲ್ಲಾ ಪಂಚಾಯತಿಗಳ ಜೊತೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಇಲಾಖೆ ಗಳ ಒಟ್ಟು ೩೬ ಸ್ತಬ್ಧಚಿತ್ರಳು ನಿರ್ಮಾಣವಾಗಲಿದೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಸರ್ಕಾರದ ಗೃಹಜ್ಯೋತಿ ಯೋಜನೆ ಮಾಹಿತಿ ಒಳಗೊಂಡ ಸ್ತಬ್ಧಚಿತ್ರ ಇರಲಿದೆ. ಇದೇ ಮೊದಲ ಬಾರಿಗೆ ಮೈಸೂರು ವೈದ್ಯಕೀಯ ಕಾಲೇಜಿನ ಸ್ತಬ್ಧಚಿತ್ರ ದಸರೆಯಲ್ಲಿ ಪಾಲ್ಗೊಳ್ಳಲಿದೆ. ಮೈಸೂರು ವೈದ್ಯಕೀಯ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಐತಿಹಾಸಿಕ ಹಿನ್ನೆಲೆ, ಭೂತ ವರ್ತಮಾನ ಮತ್ತು ಭವಿಷ್ಯದ ಚಿತ್ರಣವನ್ನು ಹೊಂದಿರುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯಿಂದ ಬಾದಾಮಿ ಚಾಲುಕ್ಯರು ಮತ್ತು ಬನಶಂಕರಿ ದೇವಿ ದೇವಸ್ಥಾನ, ಬಳ್ಳಾರಿಯಿಂದ ನಾರಿ ಹಳ್ಳ ಆಣೆಕಟ್ಟು, ಬೆಳಗಾವಿಯಿಂದ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಬೆಂಗಳೂರಿನಿಂದ ಚಂದ್ರಯಾನ ೩, ಚಾಮರಾಜನಗರದಿಂದ ಜಾನಪದ ಭಕ್ತಿಯ ಬೀಡು, ಆನೆ-ಹುಲಿಗಳ ಸಂತೃಪ್ತಿಯ ಕಾಡು, ಮಂಡ್ಯದಿಂದ ಸಾಂಪ್ರದಾಯಿಕ ಆಲೆಮನೆ, ಬೀದರ್‌ನಿಂದ ಕೃಷ್ಣಮೃಗ ಸಂರಕ್ಷಣಾಧಾಮ, ರಾಯಚೂರಿನಿಂದ ನವರಂಗ ದರ್ವಾಜ, ದಾಸರ ಮಂಟಪ ಮತ್ತು ಕಲ್ಲಿದ್ದಲು ವಿದ್ಯುತ್ ಸ್ಥಾವರ, ಹಾವೇರಿಯಿಂದ ಶಂಖನಾದ ಮೊಳಗಿಸುತ್ತಿರುವ ಕನಕದಾಸರು ಮತ್ತು ಕಾಗಿನೆಲೆ, ರಾಮನಗರದಿಂದ ಚನ್ನಪಟ್ಟಣದ ಬೊಂಬೆಗಳು, ಶಿವಮೊಗ್ಗದಿಂದ ಕುವೆಂಪು ಗುಡವಿ ಪಕ್ಷಿಧಾಮ, ಕೆಳದಿ ಶಿವಪ್ಪ ನಾಯಕ, ತುಮಕೂರಿನಿಂದ ಮೂಡಲಪಾಯ ಯಕ್ಷಗಾನ ಹಾಗೂ ವಾಸ್ತುಶಿಲ್ಪ ಮತ್ತು ಉಡುಪಿಯಿಂದ ತ್ಯಾಜ್ಯ ಮುಕ್ತ ಮತ್ಯ ಸ್ನೇಹಿ ಸಮುದ್ರ, ವಿಜಯನಗರದಿಂದ ವಿಜಯವಿಠಲ ದೇವಾಲಯ ಸೇರಿದಂತೆ ೩೧ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆಯಲಿವೆ.