ಮಂಗಳೂರು(ದಕ್ಷಿಣ ಕನ್ನಡ): ಮಾಜಿ ಪ್ರಧಾನಿ ಹಾಗೂ ರಾಜ್ಯ ಸಭಾ ಸಂಸತ್ ಸದಸ್ಯರಾದ ಹೆಚ್.ಡಿ. ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು
ದೇವೇಗೌಡ ದಂಪತಿಗಳು ನಿನ್ನೆ ಮಧ್ಯಾಹ್ನ ಬೆಂಗಳೂರು ಹೆಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಸಕಲೇಶಪುರ, ಸುಬ್ರಹ್ಮಣ್ಯ ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದ ಕಾರಣದಿಂದಾಗಿ ಅದು ರದ್ದಾಯಿತು. ನಂತರದಲ್ಲಿ ವಿಮಾನ ಮೂಲಕ ಮಂಗಳೂರು ಆಗಮಿಸಿ ರಸ್ತೆ ಮಾರ್ಗವಾಗಿ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು.

ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ನಾಗಪ್ರತಿಷ್ಠೆ, ತುಲಾಭಾರ, ಮಹಾಪೂಜೆಯನ್ನು ಅವರು ಕ್ಷೇತ್ರದಲ್ಲಿ ನೆರವೇರಿಸಿದರು. ದೇವೇಗೌಡರ ಜೊತೆ ಪತ್ನಿ ಚೆನ್ನಮ್ಮ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಬೆಳಿಗ್ಗೆ ಆಶ್ಲೇಷ ಪೂಜೆ ನೆರವೇರಿಸಿದ ಎಚ್.ಡಿ.ದೇವೇಗೌಡ ದಂಪತಿ, ಬಳಿಕ ಸಂಪುಟ ನರಸಿಂಹ ದೇವರ ದರ್ಶನ ಪಡೆದರು.
ಅಲ್ಲದೇ ತುಲಾಭಾರ ಸೇವೆಯನ್ನು ದೇವೇಗೌಡ ಅವರು ನೆರವೇರಿಸಿದರು. ಅಕ್ಕಿ, ಬೆಲ್ಲ, ಕಡ್ಲೆಬೇಳೆ ಧಾನ್ಯಗಳಲ್ಲಿ ತುಲಾಭಾರ ಸೇವೆ ನಡೆಸಲಾಯಿತು. ಈ ಸಂದರ್ಭ ಧರ್ಮಪತ್ನಿ, ಕುಟುಂಬಿಕರು ಉಪಸ್ಥಿತರಿದ್ದರು.