ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಹಳೆಬಂದರು ದಕ್ಕೆ ಬಳಿ ಮೀನುಗಾರಿಕಾ ದೋಣಿಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಈ ಕುರಿತು ಮಾಹಿತಿ ತಿಳಿದ ತಕ್ಷಣ ಮಂಗಳೂರಿನ ಪಾಂಡೇಶ್ವರದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ದೋಣಿಯಲ್ಲಿ ಡೀಸೆಲ್ ಗೆ ಬೆಂಕಿ ಹೊತ್ತಿಕೊಂಡಿತ್ತು. ಲಂಗರು ಹಾಕಿದ್ದಾಗಲೇ ದೋಣಿಗೆ ಬೆಂಕಿ ತಗುಲಿದೆ. ಅದರ ಹಗ್ಗ ಬಿಚ್ಚಿ ಬಿಟ್ಟಿದ್ದಾರೆ. ದೋಣಿ ಕೆಲವು ದೂರ ನೀರಿನಲ್ಲಿ ಸಾಗಿತ್ತು. ಆದ್ದರಿಂದ ಬೆಂಕಿ ಇತರ ದೋಣಿಗಳಿಗೆ ಹಬ್ಬುವುದು ತಪ್ಪಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.
