ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ನಾಡಹಬ್ಬಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ. ನಗರದಲ್ಲಿ ಜಗಮಗಿಸುವ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗುತ್ತಿದ್ದು, ಮಧುವಣಗಿತ್ತಿಯಂತೆ ಸಜ್ಜಾಗುತ್ತಿದೆ. ಈ ಬಾರಿ ಉತ್ಸವದ ವಿಶೇಷವೆಂದರೆ ಏರ್ ಶೋ ಇರಲಿದ್ದು, ಕೇಂದ್ರ ಸರ್ಕಾರ ಈಗಾಗಲೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರದಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಬನ್ನಿ ಮಂಟಪದ ಮೈದಾನಕ್ಕೆ ಭೇಟಿ ನೀಡಿ ಸ್ಥಳ ಹಾಗೂ ಏರ್ ಶೋ ನಡೆಸಲು ಬೇಕಾದ ರೂಪುರೇಷೆ ಕುರಿತು ಪರಿಶೀಲನೆ ನಡೆಸಿದ್ದರು.
ಇಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಐದು ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್‌ಶೋ ನಡೆಯುತ್ತಿದೆ. ಅ. ೨೨ ಮತ್ತು ೨೩ರಂದು ದಸರಾ ಏರ್‌ಶೋ ನಡೆಯಲಿದೆ. ಅ.೨೨ರಂದು ಏರ್‌ಶೋ ರಿಹರ್ಸಲ್, ೨೩ ರಂದು ಸಂಜೆ ೪ ಗಂಟೆಗೆ ೪೫ ನಿಮಿಷಕ್ಕೆ ಪಂಜಿನ ಕವಾಯತು ಮೈದಾನದಲ್ಲಿ ಮುಖ್ಯ ಏರ್ ಶೋ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇನ್ನು ಏರ್ ಶೋ ವೀಕ್ಷಿಸಲು ಉಚಿತ ಪ್ರವೇಶವಿದೆ. ಏರ್ ಶೋಗೆ ಆಗಮಿಸುವವರಿಗೆ ಪಾಸ್ ನೀಡಲಾಗುವುದು. ಪಾಸ್ ಪಡೆಯಲು ಹೇಗೆ ಅಪ್ಲೈ ಮಾಡುವುದು, ವಿತರಣೆ ಹೇಗೆ ಸೇರಿದಂತೆ ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ಮತ್ತು ಸ್ಟ್ರೀಟ್ ಫೆಸ್ಟಿವಲ್ ನಡೆಸುವ ಸಂಬಂಧ ಇಂದು ಸಾಯಂಕಾಲ ಸಭೆ ನಡೆಸಿ ತಿಳಿಸಲಾಗುವುದು ಎಂದು ಹೇಳಿದರು.