ಶಿವಮೊಗ್ಗ: ಅಡಿಕೆಯ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸಲು ಸಾಕಷ್ಟು ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕೆಂದರು ಡಾ.ಸೆಲ್ವಮಣಿ ಆರ್ ರೈತರಿಗೆ ಸಲಹೆ ನೀಡಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅಡಿಕೆ ಸಂಶೋಧನಾ ಕೇಂದ್ರ ಶಿವಮೊಗ್ಗ ಹಾಗೂ ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು, ಡಿಎಎಸ್‍ಡಿ ಕ್ಯಾಲಿಕಟ್, ಕ್ಯಾಂಪ್ಕೊ, ಮಾಮ್ ಕೋಸ್, ತುಮ್ಕೋಸ್, ಅಡಿಕೆ ಪತ್ರಿಕೆ, ಅಮೃತ್ ನೋನಿ, ಕ್ರಾಸ್ಮ್, ಕ.ರಾ.ತೋ.ಇ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ನವುಲೆಯ ಕೃಷಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ಅಡಿಕೆ ಮೌಲ್ಯವರ್ಧಿತ ಉತ್ಪನ್ನ’ ಗಳ ಕುರಿತಾದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಡಿಕೆ ಸಿಪ್ಪೆ ಕೂಡ ತ್ಯಾಜ್ಯವಲ್ಲ. ಅದನ್ನು ಎಲ್ಲೆಂದರಲ್ಲಿ ಹಾಕದೆ, ಸುಡದೆ, ಸಿಪ್ಪೆ ಬಗ್ಗೆ ಸಹ ಕಾಳಜಿ ತೋರಿ ಗೊಬ್ಬರ ತಯಾರಿಸಬಹುದು. ನಮ್ಮ ಜಿಲ್ಲೆಯಲ್ಲಿ ಸುಮಾರು 100 ವರ್ಷಗಳಿಂದ ಅಡಿಕೆಯನ್ನು ಬೆಳೆಯಲಾಗುತ್ತಿದೆ. ರೈತರು ರೋಗಬಾಧೆ, ಪ್ರಾಕೃತಿಕ ವಿಕೋಪ, ಇತರೆ ಸವಾಲುಗಳನ್ನು ಎದುರಿಸಿ ಬೆಳೆ ಬೆಳೆಯುತ್ತಿದ್ದಾರೆ. ವಿಜ್ಞಾನಿಗಳು ಅಡಿಕೆಯ ಉತ್ತಮ ತಳಿ, ರೋಗ ನಿರ್ವಹಣೆ ಕುರಿತು ಹೆಚ್ಚು ಅಧ್ಯಯನ ಮಾಡಿ ರೈತರು ಒಳ್ಳೆಯ ಇಳುವರಿ ಪಡೆಯಲು ಸಹಕರಿಸಬೇಕು. ಹಾಗೂ ರೈತರಿಗೆ ಉತ್ತಮ ಬೆಲೆ ಸಿಗಬೇಕೆಂದು ಹಾರೈಸಿದರು.
ಮೇಘಾಲಯದಲ್ಲಿ ಒಂದು ತಂಡ ಶೇ.60 ಅಡಿಕೆ ಸಿಪ್ಪೆ ಬಳಸಿ ಬಟ್ಟೆ ತಯಾರಿಸಿದೆ. ಅಡಿಕೆ ಸಿಪ್ಪೆ/ಸೋಗೆ ಬಳಸಿ ಅಣಬೆ ಬೆಳೆಯಲಾಗುತ್ತಿದೆ, ಅಡಿಕೆ ಸಿಪ್ಪೆ, ಸೋಗೆಯಿಂದ ಗೊಬ್ಬರ ಮಾಡಬಹುದು. ಅಡಿಕೆಯಲ್ಲಿ ಔಷಧೀಯ ಗುಣಗಳು ಕೂಡ ಹೆಚ್ಚಿರುವುದು ಕಂಡು ಬಂದಿದೆ. ದೇಹದಲ್ಲಿನ ಫ್ರೀ ರ್ಯಾಡಿಕಲ್ಸ್ ನಿರ್ಮೂಲನೆ ಮಾಡಲು ಸಹಕರಿಸುತ್ತದೆ. ರೋಗ ನಿರ್ಮೂಲನೆ, ಸಕ್ಕರೆ ಖಾಯಿಲೆಯಲ್ಲಿ ಸಹ ಅಡಿಕೆ ಸಹಕಾರಿಯಾಗಿದ್ದು ವಿಶಿಷ್ಟ ಅಂಶಗಳನ್ನು ಹೊಂದಿರುವ ಅಡಿಕೆ ಮೌಲ್ಯವರ್ಧನೆಯಿಂದ ರೈತರು ಹೆಚ್ಚು ಆದಾಯ ಗಳಿಸಬಹುದು ಎಂದರು.
ಅಡಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ನಾಗರಾಜಪ್ಪ ಅಡಿವಪ್ಪರ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಸುಮಾರು 67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಪರಿಸರ ಸ್ನೇಹಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಅಡಿಕೆ ಮೌಲ್ಯವರ್ಧನೆಯಿಂದ ರೈತರು ಲಾಭ ಹೊಂದಬಹುದು. ಇಂದಿನ ಕಾರ್ಯಾಗಾರದಲ್ಲಿ ಹೊರದೇಶದಿಂದ, ಹೊರ ರಾಜ್ಯಗಳಿಂದ ಪ್ರತಿನಿಧಿಗಳು, ನೂರಾರು ವಿಜ್ಞಾನಿಗಳು, ನವೋದ್ಯಮಿಗಳು, ವಿದ್ಯಾರ್ಥಿಗಳು, ರೈತರು, ಅಧಿಕಾರಿಗಳು ಪಾಲ್ಗೊಂಡಿದ್ದು, 2 ತಾಂತ್ರಿಕ ಗೋಷ್ಟಿಗಳು ಮತ್ತು 1 ವಸ್ತುಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಕೆ.ನಾಗರಾಜ್, ಶಿಕ್ಷಣ ನಿರ್ದೇಶಕ ಹೇಮ್ಲಾನಾಯ್ಕ್, ಡಾ.ಪ್ರದೀಪ್ ಎಸ್, ಡಾ.ಕೆ.ಟಿ.ಗುರುಮೂರ್ತಿ, ಡಾ.ತಿಪ್ಪೇಶ್, ಡಾ.ಆರ್.ಗಣೇಶ್ ನಾಯ್ಕ್, ಅಡಿಕೆ ಪತ್ರಿಕೆಯ ಪಡ್ರೆ, ರೈತರು, ಉದ್ಯಮಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.
