ಪಿರಿಯಾಪಟ್ಟಣ: ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಕೊರತೆ ಎದುರಾಗಿರುವ ಪಿರಿಯಾಪಟ್ಟಣವನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಬರ ನಿರ್ವಹಣೆ ಹಾಗೂ ಕುಡಿವ ನೀರಿನ ಸಮಸ್ಯೆಯಾದಂತೆ ಕ್ರಮಕೈಗೊಳ್ಳಬೇಕು ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ತಾಲೂಕಿನ ಸುಂಡವಾಳು, ಕೋಮಲಾಪುರ, ನಂದಿನಾಥಪುರ, ಐಲಾಪುರ, ಬೆಕ್ಕರೆ, ನೆರಳೆಕುಪ್ಪೆ, ಸನ್ಯಾಸಿಪುರ, ಕಗ್ಗುಂಡಿ, ರಾಮನಾಥ ತುಂಗ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಹುಣಸವಾಡಿ ಗ್ರಾಮದಲ್ಲಿ ಮಾತನಾಡಿದರು. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ, 195 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು ಈ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಪಿರಿಯಾಪಟ್ಟಣವು ಸೇರಿದೆ ಆದ್ದರಿಂದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಈ ಎಲ್ಲಾ ತಾಲ್ಲೂಕಿನಲ್ಲಿ ಬೆಳೆ ಹಾನಿ ಸಮೀಕ್ಷೆ ಸೇರಿದಂತೆ ಗ್ರಾಮಗಳಲ್ಲಿ ಕುಡಿಯುವ ನೀರು, ನೈರ್ಮಲ್ಯಕ್ಕೆ ಕೊರತೆ ಬಾರದಂತೆ ಎಚ್ಚರಿಕೆ ವಹಿಸಬೇಕು.
ಈಗಾಗಲೇ ಬರಪೀಡಿತ ತಾಲೂಕುಗಳಿಗೆ ಜಿಲ್ಲಾಧಿಕಾಧಿಕಾರಿಗಳ ನೇತೃತ್ವದಲ್ಲಿ ಬರ ನಿರ್ವಹಣೆ ಕಾರ್ಯಕ್ರಮ ಕೈಗೊಳ್ಳಲು ಸರ್ಕಾರದಿಂದ ಕಾಲಕಾಲಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ನಿಯಮಗಳ ಅನ್ವಯ ಮಾರ್ಗಸೂಚಿಗಳನ್ನು ನೀಡಲಾಗಿದ್ದು ಇದಕ್ಕೆ ಅನುಗುಣವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದ ಅವರು, ತಾಲೂಕಿನಲ್ಲಿ ಡಿಸೆಂಬರ್ ತಿಂಗಳ ಒಳಗೆ 150 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು.
ಸಚಿವರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಗ್ರಾಮದ ದೇವಾಲಯಕ್ಕೆ ಅನುದಾನ, ಸಮುದಾಯ ಭವನಕ್ಕೆ ಜಾಗ, ವೈಯಕ್ತಿಕ ನಿವೇಶನ, ಕೆರೆ ಒತ್ತುವರಿ ತೆರವು, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ವಿವಿಧ ಇಲಾಖೆಗಳ ಸಹಾಯಧನ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕುಂಞಿ ಅಹಮದ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಪಿಡಿಒ ಪಿ.ಆರ್.ಮಂಜುನಾಥ್, ದೇವರಾಜು ಗೌಡ, ಗ್ರಾಪಂ ಅಧ್ಯಕ್ಷ ಲೋಕೇಶ್, ಮುಖಂಡರಾದ ಟಿ.ಡಿ.ನಾಗಣ್ಣ, ನಂದಿನಾಥಪುರ ಸತೀಶ್, ತೆಲುಗಿನಕುಪ್ಪೆ ಗಿರೀಶ್, ಸುಂಡವಾಳು ಮಹಾದೇವ್, ಪಿ.ಮಹದೇವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.