ಮೈಸೂರು: ಅ. ೧೮ ರಿಂದ ೨೧ರವರೆಗೆ ಯುವ ದಸರಾ ಆಯೋಜನೆ ಮಾಡಲಾಗಿದ್ದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಸಂಭ್ರಮ ಮನೆಮಾಡಲಿದೆ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ಮೂಲಕ ಎಸ್.ಪಿ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಒಟ್ಟು ನಾಲ್ಕುದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ಆಗಿದೆ. ಸಂಜೆ ೬.೩೦ ರಿಂದ ರಾತ್ರಿ೧೦.೩೦ರವರಿಗೆ ನಡೆಯಲಿರುವ ಯುವ ದಸರಾವನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಉದ್ಘಾಟಿಸಲಿದ್ದಾರೆ ಎಂದರು.
ಯುವ ದಸರಾ ಉದ್ಘಾಟನೆಯಲ್ಲಿ ನಟ ಶಿವರಾಜ್ ಕುಮಾರ್ ಭಾಗವಹಿಸಲಿದ್ದಾರೆ. ಜೊತೆಗೆ ಕನ್ನಡ ಹಿನ್ನೆಲೆ ಗಾಯಕ ಸಂಜೀತ್ ಹೆಗ್ಡೆ ಮತ್ತು ತಂಡದಿಂದ ಕಾರ್ಯಕ್ರಮ ಕೂಡ ನಡೆಯಲಿದ್ದು, ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಅಷ್ಟೇ ಅಲ್ಲ, ಮೊದಲ ದಿನವೇ ಸಾಧು ಕೋಕಿಲ ಹಾಗೂ ತಂಡದಿಂದ ಸಂಗೀತ ರಸದೌತಣ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಕನ್ನಡ ರ್ಯಾಪರ್ ಆಲ್ ಓಕೆ ತಂಡದಿಂದ ಕೂಡ ಸಂಗೀತ ಕಾರ್ಯಕ್ರಮ ಇದ್ದು, ಇದರ ಜೊತೆ ಬೆನ್ನಿ ದಯಾಳ್ ಸೇರಿ ಬಾಲಿವುಡ್ ಹಾಡುಗಾರರಿಂದ ಸಂಗೀತ ರಸದೌತಣ ನಡೆಯಲಿದೆ. ಇನ್ನು ಸ್ಥಳೀಯ ಪ್ರತಿಭೆಗಳಿಗೂ ಈ ಬಾರಿಯ ಯುವ ದಸರಾದಲ್ಲಿ ಅವಕಾಶ ಕೊಡಲಾಗಿದೆ ಎಂದು ಮೈಸೂರು ಎಸ್.ಪಿ ಸೀಮಾ ಲಾಟ್ಕರ್ ಹೇಳಿದರು.