ಬಹು ನಿರೀಕ್ಷಿತ ಕನ್ನಡ ಬಿಗ್ ಬಾಸ್ ಸೀಸನ್ ೧೦ ಪಾರಂಭಗೊಂಡಿದೆ. ಜನಪ್ರಿಯ ರಿಯಾಲಿಟಿ ಶೋ ಆರಂಭದಲ್ಲೇ ಸದ್ದು ಮಾಡುತ್ತಿದೆ. ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದಾರೆ. ಅಷ್ಟಕ್ಕೂ ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ಮನೆಗೆ ಹೋಗಿದ್ದ ಕಾರಣವೇನು ಎಂಬುದರ ಬಗ್ಗೆ ಸ್ವತಃ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್ ಬಾಸ್ ಮನೆಗೆ ೧೭ ಸ್ಪರ್ಧಿಗಳನ್ನು ಕಳುಹಿಸಿದ್ದರು. ಸೋಮವಾರದಂದು ೧೮ನೇ ಸ್ಪರ್ಧಿಯಾಗಿ ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ದೊಡ್ಮನೆಗೆ ಎಂಟ್ರಿ ಕೊಟ್ಟರು. ಅವರು ಮನೆಗೆ ಅತಿಥಿಯಾಗಿ ಹೋಗಿದ್ದರೋ ಅಥವಾ ಸ್ಪರ್ಧಿಯಾಗಿ ಹೋಗಿದ್ದರೋ ಎಂಬ ವಿಷಯದಲ್ಲಿ ಗೊಂದಲವಿತ್ತು.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರೋ ಶಾಸಕ ಪ್ರದೀಪ್ ಈಶ್ವರ್, ನಾನು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿರಲಿಲ್ಲ, ಬದಲಾಗಿ ಅತಿಥಿಯಾಗಿ ಹೋಗಿದ್ದೆ. ಬಿಗ್ ಬಾಸ್ ಎನ್ನುವುದು ದೊಡ್ಡ ವೇದಿಕೆ. ಆ ಕಾರ್ಯಕ್ರಮಕ್ಕೆ ಸಾಕಷ್ಟು ವೀಕ್ಷಕರಿದ್ದಾರೆ. ಕಾರ್ಯಕ್ರಮ ನಡೆಸಿಕೊಡುವ ತಂಡ ಎರಡ್ಮೂರು ತಾಸಿಗೆ ಅತಿಥಿಯಾಗಿ ಬನ್ನಿ ಎಂದು ಕರೆದರು.
ಯಾರು ಕರೆದರೂ ಹೋಗಿ ಮಾತನಾಡುತ್ತೇನೆ, ಸಂದರ್ಶನ ಕೊಡುತ್ತೇನೆ. ಅದೊಂದು ಸೌಜನ್ಯ. ಇನ್ನು ಯುವಕರಿಗೆ ಒಂದು ಸಂದೇಶ ಕೊಡಬೇಕಿತ್ತು. ಅಪ್ಪ ಅಮ್ಮನ ಮಹತ್ವ ಹೇಳಬೇಕಿತ್ತು. ಯುವಕರನ್ನು ಮೋಟಿವೇಟ್ ಮಾಡಬೇಕಿತ್ತು. ನಾನು ನನ್ನ ಯೂಟ್ಯೂಬ್ ಚಾನಲ್ ಸೇರಿದಂತೆ ಹಲವು ವೇದಿಕೆಗಳಲ್ಲಿ ಈ ಕೆಲಸ ಮಾಡುತ್ತಿದ್ದೇನೆ. ಅದೇ ರೀತಿ ಈ ವೇದಿಕೆಯಲ್ಲೂ ಅದನ್ನೇ ಮಾಡಿದ್ದೇನೆ. ಮಿಕ್ಕಂತೆ ಏನೂ ಇಲ್ಲ. ಅಲ್ಲಿ ಹೋಗಿ ನಾನು ಓರ್ವ ಸ್ಪರ್ಧಿ ಎಂದು ಪ್ರ್ಯಾಂಕ್ ಮಾಡಬೇಕಿತ್ತು, ಅದನ್ನು ಮಾಡಿದೆ ಅಷ್ಟೇ. ನಿಮ್ಮ ಒಂದು ಎಪಿಸೋಡ್ ಹೋಗಲಿ, ಒಂದಿಷ್ಟು ಕುತೂಹಲ ಇರಲಿ ಎಂದು ಚಾನಲ್‌ನವರು ಹೇಳಿದ್ದರು. ಅದರಂತೆ ಒಂದು ಕಂತಿನಲ್ಲಿ ಮಾತ್ರ ಇದ್ದು ಬಂದೆ ಎಂದು ಶಾಸಕರು ತಿಳಿಸಿದರು.