ಮೈಸೂರು: ದಸರಾ ಉದ್ಘಾಟನೆ ಯಾವುದೇ ಅಡಚಣೆ ಉಂಟಾಗಬಾರದು. ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಅನುಮತಿ ನಿರಾಕರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅ. ೧೫ ರಂದು ದಸರಾ ಉದ್ಘಾಟನೆ ನಡೆಯಲಿದೆ. ಆದರೆ, ಯಾವುದೇ ಸಮಸ್ಯೆಯಾಗಬಾರದು. ಶಾಂತಿ ಸುವ್ಯವಸ್ಥೆಗಾಗಿ ಎರಡೂ ಕಾರ್ಯಕ್ರಮಗಳಿಗೂ ಪರವಾನಗಿ ನೀಡಿಲ್ಲ. ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಎರಡೂ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಣೆ ಮಾಡಿದ್ದೇವೆ. ಒಂದು ವೇಳೆ ಈ ಕಾರ್ಯಕ್ರಮಗಳನ್ನು ನಡೆಸಲು ಮುಂದಾದಲ್ಲಿ ೧೪೪ ಜಾರಿ ಮಾಡಲಾಗುತ್ತದೆ. ಸನ್ನಿವೇಶವನ್ನು ಗಮನಿಸಿ, ೧೪೪ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಮೈಸೂರು ನಗರದ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಇರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಇದನ್ನು ಮೀರಿದರೆ, ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಎಚ್ಚರಿಕೆ ನೀಡಿದರು.