ರಾಮನಗರ: ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಬಹು ಮುಖ್ಯ. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ಅನಿತ ಎನ್.ಪಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ವಿಭಾಗದ ಸಹಯೋಗದೊಂದಿಗೆ ಪೊಲೀಸ್ ಭವನದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಪ್ರತಿಯೊಬ್ಬರೂ ಸಹ ಒತ್ತಡದಿಂದಲೇ ಬದುಕುತ್ತಿದ್ದಾರೆ. ಒತ್ತಡಗಳು ಇದ್ದರೆ ಪ್ರತಿನಿತ್ಯದ ಕೆಲಸ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಸಾಧ್ಯ, ಒತ್ತಡಗಳು ಇಲ್ಲದಿದ್ದರೆ ಪ್ರತಿನಿತ್ಯದ ಕೆಲಸ ಕಾರ್ಯಗಳು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರುತ್ತೇವೆ. ಇದರಿಂದಾಗಿ ಕೆಲಸ ಕಾರ್ಯಗಳು ಸರಿಯಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ನಮ್ಮಲ್ಲೂ ಸಹ ಬೆಳೆಯುವ ಶಕ್ತಿಯಿದೆ ಎಂಬುದನ್ನು ತೋರಿಸಲು ನಿಯಮಿತವಾದ ಒತ್ತಡ ಅವಶ್ಯಕವಿರುತ್ತದೆ. ಆದರೆ ಹೆಚ್ಚು ಒತ್ತಡದಿಂದ ಕೆಲಸಗಳನ್ನು ನಿರ್ವಹಿಸಬಾರದು ಇದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.
ಜೀವನ ಶೈಲಿಯನ್ನು ಸಮತೋಲನವಾಗಿ ನಿರ್ವಹಿಸುವುದನ್ನು ರೂಡಿಸಿಕೊಳ್ಳಬೇಕು. ಒಳ್ಳೆಯ ಆರೋಗ್ಯ ಶೈಲಿಯನ್ನು ಕಾಪಾಡಿಕೊಳ್ಳಲು ಒತ್ತಡಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಾಡಬೇಕಾದ ಕೆಲಸಗಳನ್ನು ಮಾಡಬೇಕಾದ ಸಮಯದಲ್ಲೇ ಮಾಡಿ ಮುಗಿಸಬೇಕು ಇದರಿಂದಾಗಿ ಒತ್ತಡಗಳು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಸಮಸ್ಯೆಗಳನ್ನು ಅತಿಯಾಗಿ ಮನಸ್ಸಿಗೆ ತೆಗೆದುಕೊಳ್ಳದೇ ಸರಿಯಾಗಿ ನಿಭಾಯಿಸಿದಾಗ ಮಾತ್ರ ಮಾನಸಿಕ ಕಾಯಿಲೆಯಿಂದ ದೂರ ಉಳಿಯಬಹುದು. ದೇಹಕ್ಕೆ ಮಾತ್ರವಲ್ಲದೇ ಮನಸ್ಸಿಗೂ ಚಿಕಿತ್ಸೆಯ ಅವಶ್ಯಕತೆ ಇದೆ ಎಂದರು.
ಅಪರ ಪೊಲೀಸ್ ಅಧೀಕ್ಷಕರಾದ ಸುರೇಶ್ ಟಿ.ವಿ ಅವರು ಮಾತನಾಡಿ, ಎಲ್ಲಾ ಸಮಯ ಸಂದರ್ಭದಲ್ಲಿ ನೆಮ್ಮದಿಯಿಂದ ಇರುತ್ತಾ, ಎಲ್ಲರೊಡನೆ ಹೊಂದಾಣಿಕೆಯಿಂದ ಬದುಕುತ್ತಾ, ಸ್ವಾವಲಂಬಿಯಾಗಿ, ಸಂತೋಷವಾಗಿ, ತೃಪ್ತಿಕರವಾಗಿರುವುದೇ ಮಾನಸಿಕ ಆರೋಗ್ಯ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳಾದ ಡಾ. ಮಂಜುನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-೨೦೨೩ರ ಕುರಿತು ಕರಪತ್ರ ಬಿಡುಗಡೆ ಮಾಡಿದರು.
ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಕುಮಾರ್, ಜಿಲ್ಲಾ ರೋಗವಾಹಕ ಆಶ್ರಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಶಿಧರ್ ಎಂ.ಎನ್., ರಾಮನಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ, ಮಾನಸಿಕ ಆರೋಗ್ಯ ವಿಭಾಗದ ಮನೋರೋಗ ತಜ್ಞರಾದ ಡಾ. ಆದರ್ಶ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.