ಮಂಡ್ಯ: ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆದಿದ್ದು, ತಮಿಳುನಾಡಿಗೆ ಮತ್ತೆ ನೀರು ಹರಿಸಲು ಆದೇಶ ಹೊರಡಿಸಿದೆ. ತಮಿಳುನಾಡು ಪ್ರತಿನಿತ್ಯ ಬರೊಬ್ಬರಿ ೧೬ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ, ೩ ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಆದೇಶಿಸಿದೆ. ಅದರಂತೆ ಅ. ೧೬ ರಿಂದ ಅ.೩೧ ರವರೆಗೆ ನೀರು ಹರಿಸುವಂತೆ ಸೂಚಿಸಲಾಗಿದೆ. ಈ ಕುರಿತು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಸಂಸದೆ ಸುಮಲತಾ ಅವರು ಇದು ನಾವು ನಿರೀಕ್ಷೆ ಮಾಡಿದ್ದೇವು. ಇವರು ಏನ್ ಅಂಕಿ ಅಂಶ ಇಟ್ಕೊಂಡು ವಾದ ಮಾಡ್ತಾರೋ? ಸದ್ಯ ಮಳೆ ಬಂದಿದ್ದರಿಂದ ಡ್ಯಾಮ್ ಮತ್ತೆ ೧೦೦ ಅಡಿ ದಾಟಿದೆ. ಸರ್ಕಾರ ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು ಎಂದರು.
ರಾಜ್ಯ ಸರ್ಕಾರ ಇದಕ್ಕೆ ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕು: ಎರಡು ರಾಜ್ಯಗಳು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ತಮಿಳುನಾಡಿನವರು ಅಷ್ಟೊಂದು ಅಗ್ರೆಸಿವ್ ಆಗಿ ವಾದ ಮಾಡುತ್ತಾರೆ. ಆದ್ರೆ, ನಾವು ಆ ರೀತಿ ವಾದ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಸರಿಯಾದ ರೀತಿಯಲ್ಲಿ ವಾದ ಮಾಡುತ್ತಿಲ್ಲ ಎಂದು ಹೇಳುತ್ತಿಲ್ಲ. ಆದ್ರೆ, ನೂರಕ್ಕೆ ನೂರರಷ್ಟು ತಯಾರಾಗಿ ವಾದ ಮಾಡಬೇಕು. ನಾವು ನೀರು ಬಿಡಲ್ಲ ಎಂದು ವಾದ ಮಾಡುವುದಕ್ಕೆ ಆಗಲ್ಲ. ಪ್ರಾಕ್ಟಿಕಲ್ ಆಗಿ ಅದು ಸಾಧ್ಯವಾಗುವುದಿಲ್ಲ. ಆದ್ರೆ, ನಮ್ಮ ಜಿಲ್ಲೆಗೆ, ನಮ್ಮ ರಾಜ್ಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದರು.
ಜೆಡಿಎಸ್ -ಬಿಜೆಪಿ ಹೊಂದಾಣಿಕೆ ವಿಚಾರ : ಅದರ ಬಗೆಗೆ ನನಗೆ ಸರಿಯಾದ ಕಮ್ಯೂನಿಕೇಷನ್ ಇಲ್ಲದೆ ಮಾತನಾಡಲ್ಲ. ಎಲ್ಲರನ್ನೂ ಕರೆದು, ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿ ನಿರ್ಧಾರಕ್ಕೆ ಬರಬೇಕು ಅನ್ನೋದು ನನ್ನ ಅಭಿಪ್ರಾಯ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳದಿದ್ದರೆ ಕಳೆದ ಚುನಾವಣೆ ನಡೆದ ರೀತಿ ಎಲ್ಲರೂ ನೋಡಿದ್ದೀರಿ. ಕಳೆದ ಬಾರಿಯೂ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಯಾಗಿದ್ದವು. ಆದ್ರೆ, ರಿಸಲ್ಟ್ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಎಲ್ಲರ ಆಶೀರ್ವಾದ ಇದ್ರೆ, ಮಂಡ್ಯದಲ್ಲೇ ಸ್ಪರ್ಧೆ ಮಾಡುತ್ತೇನೆ ಎನ್ನುವ ಮೂಲಕ ಮಂಡ್ಯದಿಂದ ಸ್ಪರ್ಧೆ ಮಾಡೋ ಬಗೆಗೆ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.