ಪಿರಿಯಾಪಟ್ಟಣ: ತಾಲೂಕಿನ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 2009 – 10ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಅಂದಾಜು 51 ಸಾವಿರ ರುಾ ಮೌಲ್ಯದಲ್ಲಿ ಕ್ರೀಡಾ ಸಲಕರಣೆ ವಿತರಣೆ ಹಾಗೂ ನೂತನವಾಗಿ ಸರಸ್ವತಿ ವಿಗ್ರಹ, ಶಾಲೆಯ ಮುಖ್ಯದ್ವಾರದ ಗೇಟ್, ಧ್ವಜ ಕಂಬ ಹಾಗೂ ಸಾಂಸ್ಕೃತಿಕ ವೇದಿಕೆಗೆ ಸುಣ್ಣ ಬಣ್ಣ ಹೊಡಿಸಿ ತಾವು ಕಲಿತ ಶಾಲೆಗೆ ತಮ್ಮ ಕೈಲಾದ ಕೊಡುಗೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಪ್ರಭ ಅವರು ಮಾತನಾಡಿ ತಾವು ಓದಿದ ಶಾಲೆಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂಬ ಮನೋಭಾವನೆಯಿಂದ ಹಿರಿಯ ವಿದ್ಯಾರ್ಥಿಗಳು ಶಾಲಾ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ, ಸಮಾಜದಲ್ಲಿ ನಾವು ಎಷ್ಟೇ ಉನ್ನತ ಸ್ಥಾನಮಾನ ಅಲಂಕರಿಸಲು ಪ್ರಮುಖವಾಗಿ ನಾವು ಕಲಿತ ಶಾಲೆ ಹಾಗೂ ಶಿಕ್ಷಕರ ಪಾತ್ರ ಅಪಾರವಾಗಿರುತ್ತದೆ ಅದನ್ನು ನೆನೆದು ತಾವು ಕಲಿತ ಶಾಲೆಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಶಿಕ್ಷಣಾಸಕ್ತರಾದ ಮುಖಂಡ ನಾಗೇಂದ್ರ ಅವರು ಮಾತನಾಡಿ ಸರ್ಕಾರದ ಅನುದಾನ ಜೊತೆಗೆ ಸಂಘ ಸಂಸ್ಥೆಗಳು ಮತ್ತು ಹಿರಿಯ ವಿದ್ಯಾರ್ಥಿಗಳು ಕೈಜೋಡಿಸಿದಾಗ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ 2009 – 10 ನೇ ವರ್ಷದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಾಲಾಭಿವೃದ್ಧಿಗೆ ಕೈ ಜೋಡಿಸಿರುವುದು ಸಂತಸದ ವಿಷಯ ಎಂದರು.
ಹಿರಿಯ ವಿದ್ಯಾರ್ಥಿಗಳಾದ ಯಶವಂತ್, ರಾಮು, ಚೇತನ್, ಕೃಷ್ಣಶೆಟ್ಟಿ, ಆನಂದ್ ಮದನ್ ತಮ್ಮ ಅನಿಸಿಕೆ ಹಂಚಿಕೊಂಡರು, ಈ ಸಂದರ್ಭ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ವಿಜಯ್, ಶಿಕ್ಷಕರಾದ ತಿಪ್ಪೇಸ್ವಾಮಿ, ನರಸಿಂಹಮೂರ್ತಿ, ತ್ರಿವೇಣಿ, ಲಕ್ಷ್ಮಿ, ದಿನೇಶ್, ಎಫ್‌ಡಿಎ ರಾಕೇಶ್ ಮತ್ತು 2009 – 10ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು ಇದ್ದರು.
