ಹೊಸೂರು: ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭೆ ಚುನಾವಣೆ ಬೆನ್ನಲ್ಲೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೆ ಇದೀಗ ಮೈಸೂರು ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಹೊರಟಿರುವ ಜೆಡಿಎಸ್ ಪಕ್ಷ ಈ ಕ್ಷೇತ್ರವನ್ನು ತನಗೆ ನೀಡಬೇಕೆಂದು ಪಟ್ಟು ಹಿಡಿದಿದ್ದು, ಇದಕ್ಕೆ ಬಿಜೆಪಿ ಹೈಕಮಾಂಡ್ ಯಾವ ತಿರ್ಮಾನ ಕೈಗೊಳ್ಳುತ್ತದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಮಂಡ್ಯ, ಹಾಸನ.ಕೋಲಾರ, ಸೇರಿದಂತೆ ಇದೀಗ ಮೈಸೂರು ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪರಮಾಪ್ತ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ರಾಜಕೀಯ ನೆಲೆ ಕಲ್ಪಿಸಲು ಹೊರಟಿರುವುದು ಬಿಜೆಪಿ ಪಕ್ಷಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪಸಿಂಹ ಅವರು ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾಗಿದ್ದರು, ಸಹ ಈ ಕ್ಷೇತ್ರದಲ್ಲಿ ಸಾ.ರಾ.ಮಹೇಶ್ ಅವರನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿ ಮಾಡಲು ಎಚ್.ಡಿ.ಕುಮಾರ ಸ್ವಾಮಿ ಬಾರಿ ಪಟ್ಟು ಹಿಡಿದಿದ್ದು, ಇದಕ್ಕೆ ಯಾವ ರೀತಿ ಬಿಜೆಪಿ ಹೈಕಮಾಂಡ್ ಮನ್ನಣೆ ನೀಡಲಿದೆ ಎಂದು ಎದುರು ನೋಡುವಂತಾಗಿದೆ.
ಈಗಾಗಲೇ ಈ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಆದರೆ ಸಾಕಷ್ಟು ಅನುಕೂಲ ಇದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿರುವ ಬೆನ್ನಲ್ಲೆ ಈ ಕ್ಷೇತ್ರವನ್ನು ತಮಗೆ ನೀಡಿ ಎಂದು ಕುಮಾರಸ್ವಾಮಿ ದಾಳ ಉರುಳಿಸಿದ್ದು, ಇದರಿಂದ ಸಾ.ರಾ.ಮಹೇಶ್ ಅವರನ್ನು ಮತ್ತೊಮ್ಮೆ ಚುನಾವಣಾ ಅಖಾಡಕ್ಕೆ ಇಳಿಸಲು ಮುಂದಾಗಿರುವುದು ಮೈಸೂರು-ಕೊಡಗು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಕುಮಾರಸ್ವಾಮಿಗೆ ಯಾಕೆ ಈ ಕ್ಷೇತ್ರದ ಮೇಲೆ ಕಣ್ಣು.?
ಒಂದೆಡೆ ತಮ್ಮ ಪರಮಾಪ್ತ ಸಾ.ರಾ.ಮಹೇಶ್ ಅವರಿಗೆ ಈ ಕ್ಷೇತ್ರ ಪಟ್ಟು ಹಿಡಿದಿರುವ ಕುಮಾರಸ್ವಾಮಿ ಅವರ ಲೆಕ್ಕಚಾರವೇ ಬೇರೆ ಕಳೆದ ಬಾರಿ ಈ ಕ್ಷೇತ್ರದಲ್ಲಿ ಮೈಸೂರಿನ ಎನ್.ಆರ್.ಕ್ಷೇತ್ರವನ್ನು ಹೊರತು ಪಡಿಸಿ ಉಳಿದ ಕ್ಷೇತ್ರದಲ್ಲಿ ಬಿಜೆಪಿ ಹೆಚ್ಚು ಮತಪಡೆದಿರುವುದು. ಜತಗೆ ಕ್ಷೇತ್ರದಲ್ಲಿ ಜೆಡಿಎಸ್ ನ ಮತಗಳು ಗಟ್ಟಿ ಇರುವುದು. ಅಲ್ಲದೇ ತಮ್ಮ ಅವದಿಯಲ್ಲಿ ಮಡಿಕೇರಿ ಜಿಲ್ಲೆಯಲ್ಲಿ ಕುಶಾಲನಗರ,ಪೊನ್ನಪೇಟೆ ತಾಲೂಕುಗಳನ್ನುಮಾಡಿರುವುದು ಅಲ್ಲದೇ ಕೊಡಗಿನಲ್ಲಿ ಮಳೆ ಹಾನಿ ಆದಾಗ ಸಾ.ರಾ.ಮಹೇಶ್ ಅವರು ಹಗಲು-ರಾತ್ರಿ ಅಲ್ಲಿಯೇ ಇದ್ದು ಅವರ ನೋವಿಗೆ ಸ್ಪಂದಿಸಿರುವುದು ಮತ್ತು ನಿರಾಶ್ರಿತರಿಗೆ 900 ಮನೆಗಳನ್ನು ನಿರ್ಮಿಸಿ ಕೊಟ್ಟುರುವುದು ಗೆಲುವಿಗೆ ಪೂರಕವಾಗಲಿದೆ ಎನ್ನುವ ಅಂಶವನ್ನು ಇಟ್ಟು ಕೊಂಡು ಈ ಕ್ಷೇತ್ರದ ಮೇಲೆ ಕುಮಾರಸ್ವಾಮಿ ಕಣ್ಣು ಇಟ್ಟಿದ್ದಾರೆ ಎನ್ನಲಾಗುತ್ತಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ಮಾಡಿದರೇ ಸಿದ್ದರಾಮಯ್ಯನವರ ಮೇಲೆ ಆ ಪಕ್ಷದ ಹೈಕಮಾಂಡ್ ಗೆ ಬೇರೆ ಸಂದೇಶ ಹೋಗಲಿದೆ. ಈ ಲೆಕ್ಕಾಚಾರವನ್ನು ಅಳೆದು ತೂಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಈ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು ಹಾಕಿದೆ ಎಂದು ಹೇಳಲಾಗುತ್ತಿದೆ.
ಈ ಕ್ಷೇತ್ರದಲ್ಲಿ ಮೈತ್ರಿಗೆ ವಿರೋದ ಇಲ್ಲದೇ ಇರುವುದು, ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳು ಜೆಡಿಎಸ್ ಪರವಾಗಿರುವುದು. ಅಲ್ಲದೇ ಸಾ.ರಾ.ಮಹೇಶ್ ಅವರು ಸೋತಿರುವ ಅನುಕಂಪದ ಜತೆಗೆ ಬಿಜೆಪಿ ಪಕ್ಷದ ಸಾಂಪ್ರದಾಯಿಕ ಮತಗಳು ಕ್ರೋಡಿಕರಿಸಿದರೇ ಮೈತ್ರಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಚಾರಗಳು ಇರುವ ಪರಿಣಾಮವಾಗಿಯೇ ಕುಮಾರಸ್ವಾಮಿ ಸಾ.ರಾ.ಮಹೇಶ್ ಅವರನ್ನು ಕಣಕ್ಕೆ ಇಳಿಸಲು ಮುಂದಾಗಿದ್ದಾರೆ ಎಂದು ಜೆಡಿಎಸ್ ಪಕ್ಷದ ಮೂಲಗಳು ಹೇಳುತ್ತಿವೆ.
ಪುತ್ರನ ಮದುವೆ ನಂತರ ಸಾ.ರಾ ರಾಜಕೀಯ ನಡೆ ಪ್ರಕಟ.?
ಕೆ.ಆರ್.ನಗರ ಕ್ಷೇತ್ರದಲ್ಲಿ ಸೋತ ನಂತರ ಅಲ್ಲಿ ಹೆಚ್ಚು ಕಾಣಿಸಿಕೊಳ್ಳದ ಸಾ.ರಾ.ಮಹೇಶ್ ಅವರು ತಮ್ಮ ಪುತ್ರ ಡಾ.ಧನುಷ್ ಅವರ ಮದುವೆಯತ್ತ ಅಷ್ಟೆ ಚಿತ್ತ ಹರಿಸಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇತ್ತೀಚೆಗೆ ನೀವು ಈ ಚುನಾವಣೆಯಲ್ಲಿ ನಿಲ್ಲಬೇಕು ಇದಕ್ಕಾಗಿ ಈ ಕ್ಷೇತ್ರವನ್ನು ಪಡೆದುಕೊಳ್ಳುತ್ತೇವೆ ಇದಕ್ಕಾಗಿ ತಯಾರಿ ನಡೆಸಿ ಎಂದು ಸೂಚನೆ ಕೊಟ್ಟಿದ್ದು, ಇದರ ಬೆನ್ನಲ್ಲೆ ಮೈಸೂರು ಜಿಲ್ಲೆಯ ಸಾಕಷ್ಟು ಜೆಡಿಎಸ್ ಕಾರ್ಯಕರ್ತರು ಸಾ.ರಾ.ಮಹೇಶ್ ಅವರಿಗೆ ಈ ಚುನಾವಣೆಯಲ್ಲಿ ನಿಲ್ಲುವಂತೆ ಸಾಕಷ್ಟು ಒತ್ತಡ ತರುತ್ತಿದ್ದಾರೆ. ಇದರಿಂದ ಸಾ.ರಾ.ಮಹೇಶ್ ಅಡಕತ್ತರಿಗೆ ಸಿಲುಕಿದ್ದು ತಮ್ಮ ಪುತ್ರನ ವಿವಾಹದ ನಂತರ ತಮ್ಮ ರಾಜಕೀಯ ನಡೆ ಪ್ರಟಿಸುವ ಸಾಧ್ಯತೆ ಇದೆ
ಇದನ್ನು ಮನಗೊಂಡು ಮೈಸೂರು ಜಿಲ್ಲೆಯಲ್ಲಿ ತಮ್ಮದೇ ಅದ ಹಿಡಿತ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರನ್ನು ಜೆಡಿಎಸ್ ನ ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿ ಇವರ ಮೂಲಕವೇ ಜೆಡಿಎಸ್ ಹಿಡಿತ ತೆಗೆದು ಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಂತ್ರರೂಪಿಸಿದ್ದಾರೆ. ಜಿ.ಟಿ.ದೇವೇಗೌಡರನ್ನು ಸಿದ್ದ ರಾಮಯ್ಯ ಅವರ ಎದುರು ಬಾಣ ಬಿಡಿಸಿ ಇದೀಗ ಈ ಕ್ಷೇತ್ರದಲ್ಲಿ ಹಿಡಿತ ಪಡೆಯಲು ತಂತ್ರ ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈತ್ರಿಯಾದ ಹಲವು ದಿನಗಳು ಕಳೆದ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಪರಮಾಪ್ತ ಸಾ.ರಾ.ಮಹೇಶ್ ಅವರ ರಾಜಕೀಯ ಭವಿಷ್ಯಕ್ಕಾಗಿ ದಿಢೀರ್ ಆಗಿ ಮೈಸೂರು ಕ್ಷೇತ್ರವನ್ನು ಪಟ್ಟು ಹಿಡಿದಿರುವುದು ಕ್ಷೇತ್ರವನ್ನು ಬಿಡುವುದೋ ಇಲ್ಲ ಉಳಿಸಿಕೊಳ್ಳುವುದೋ..? ಎಂಬಬುದು ಬಿಜೆಪಿ ಹೈಕಮಾಂಡ್’ಗೆ ನುಂಗಲಾರದ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.
ಪಕ್ಷ ತೆಗೆದು ಕೊಳ್ಳುವ ತಿರ್ಮಾನಕ್ಕೆ ಬದ್ದ
ಮೈಸೂರು ಕ್ಷೇತ್ರದಲ್ಲಿ ಬಿಜೆಯ ಪ್ರತಾಪ ಸಿಂಹ ಅವರು ಎರಡು ಬಾರಿ ಗೆದ್ದಿರುವುದರಿಂದ ಅವರಿಗೆ ಟಿಕೆಟ್ ಕೊಡಲಿ ಎಂಬುದು ನಮ್ಮ ಬಯಕೆ ಅದರೆ ಬಿಜೆಪಿ ರಾಷ್ಟ್ರೀಯ ನಾಯಕರು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಈ ಕ್ಷೇತ್ರವನ್ನು ಯಾರಿಗೆ ನೀಡಬೇಕೆಂದು ಅವರು ತೆಗೆದು ಕೊಳ್ಳುವ ತಿರ್ಮಾನಕ್ಕೆ ಬದ್ದವಾಗಿದ್ದು, ಒಂದು ವೇಳೆ ಜೆಡಿಎಸ್ ಗೆ ಬಿಟ್ಟು ಕೊಟ್ಟರೇ ಮೈತ್ರಿಯ ಪರವಾಗಿ ಕೆಲಸ ಮಾಡುತ್ತೇವೆ
– ಮಿರ್ಲೆ ಎಂ.ಕೆ.ಶ್ರೀನಿವಾಸ ಗೌಡ, ಮೈಸೂರು ಜಿಲ್ಲಾ ಬಿಜೆಪಿ ವಕ್ತಾರು ಮತ್ತು ಮಾಜಿ ಅದ್ಯಕ್ಷ ದಸರಾ ವಸ್ತು ಪ್ರಾಧಿಕಾರ.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ಪಿರಿಯಾಪಟ್ಟಣದ ಮಾಜಿ ಶಾಸಕ ಕೆ.ಮಹದೇವ್ ಅವರು ಸಂಘಟನೆಗೆ ಇಳಿದು ಸಾ.ರಾ.ಮಹೇಶ್ ಪರ ಕೆಲಸ ಮಾಡಿದರೇ ಗೆಲುವು ಕಷ್ಟ ಆಗದು ಎಂಬ ಮಾತು ಕೇಳಿ ಬರುತ್ತಿದೆ.
ಈ ಬೆನ್ನಲ್ಲೆ ಹಾಲಿ ಇರುವ ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕೊಡಲು ಸಿದ್ದತೆ ಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್, ಇದೀಗ ಕುಮಾರಸ್ವಾಮಿ ಅವರು ಹಿಡಿದಿರುವ ಹಠಕ್ಕೆ ಶರಣಾಗುತ್ತಾ ? ಇಲ್ಲ ಮುಂದೆ ಕಾದು ನೋಡುವ ತಂತ್ರಕ್ಕೆ ಶರಣಾಗುತ್ತಾ ? ಎಂಬುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ದೊಡ್ಡಮಟ್ಟದಲ್ಲಿಯೇ ತೀತ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.