ಚಾಮರಾಜನಗರ: ಮೇರಾ ಯುವ ಭಾರತ್ ಸ್ವಾಯತ್ತ ಸಂಸ್ಥೆಯನ್ನು ಕೇಂದ್ರ ಸರ್ಕಾರ ಸ್ಥಾಪಿಸುವ ಮೂಲಕ ದೇಶದ ಯುವ ಜನರ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವುದು ಅಭಿನಂದನೀಯವೆಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಹಾಗೂ ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ಅಭಿನಂದಿಸಿದ್ದಾರೆ.
ಇಡೀ ಜಗತ್ತಿನಲ್ಲಿ ಅಪಾರ ಯುವಶಕ್ತಿಯನ್ನು ಹೊಂದಿರುವ ಭಾರತದಲ್ಲಿ ಯುವ ಜನರು ತಮ್ಮ ಇಡೀ ಶಕ್ತಿಯನ್ನು ರಾಷ್ಟ್ರಕ್ಕಾಗಿ ಅರ್ಪಿಸಿಕೊಳ್ಳುವ ದಿಕ್ಕಿನಲ್ಲಿ ತಂತ್ರಜ್ಞಾನ, ಶಿಕ್ಷಣ, ಉದ್ಯೋಗ, ನೀರಾವರಿ, ಆರೋಗ್ಯ, ಕೌಶಲ್ಯ, ವಿಜ್ಞಾನ, ಕೃಷಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಕೈಗಾರಿಕೆ, ಹಲವು ಕ್ಷೇತ್ರಗಳ ಮೂಲಕ ಸಮಗ್ರ ವಿಕಾಸವನ್ನು ರೂಪಿಸಿ ಯುವಶಕ್ತಿಯ ಸದ್ಬಳಕೆಯನ್ನು ಮಾಡಿಕೊಳ್ಳಲು ಮೇರಾ ಯುವ ಭಾರತ್ ಸಹಕಾರಿಯಾಗಲಿ.
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನ ಅಕ್ಟೋಬರ್ 31 ರಂದು ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಯುವಶಕ್ತಿಗೆ ಸಂಪೂರ್ಣ ಸಲಹೆ ,ಮಾರ್ಗದರ್ಶನ ಸ್ಪೂರ್ತಿ, ಪ್ರೋತ್ಸಾಹ ಮತ್ತು ಅವರ ವಿಕಾಸದ ಗುಣಗಳನ್ನು ಮೂಡಿಸಿ ಪರಿಪೂರ್ಣವಾದ ಶಕ್ತಿಯನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವ ಆ ಮೂಲಕ ಕುಟುಂಬದ ಶಕ್ತಿಯನ್ನು ವ್ಯಕ್ತಿತ್ವದ ಶ್ರೇಷ್ಠತೆಯನ್ನು ಬೆಳೆಸಿಕೊಳ್ಳಲು ಮೇರಾ ಯುವ ಭಾರತ್ ಹೆಚ್ಚು ಸಹಕಾರಿಯಾಗಲಿ ಎಂದು ಋಗ್ವೇದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ವರ್ಷದ ಮಹೋತ್ಸವದ ಸಂದರ್ಭದಲ್ಲಿ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ಭಾರತದ ಸಮಗ್ರ ಯುವಕರ ವಿಕಾಸಕ್ಕಾಗಿ ಆರಂಭವಾಗಲಿರುವ ಮೇರಾ ಯುವ ಭಾರತ್ ಮಹಾನ್ ಶಕ್ತಿಶಾಲಿ ಸಂಘಟನೆಯಾಗಿ ರೂಪುಗೊಳ್ಳಲಿ. ಪ್ರತಿಯೊಬ್ಬ ಭಾರತೀಯನು ಈ ಸಂಘಟನೆಗೆ ಅಪಾರ ಶಕ್ತಿಯನ್ನು ತುಂಬಬೇಕು ಎಂದು ಮನವಿ ಮಾಡಿದ್ದಾರೆ .