ಮದ್ದೂರು: ಕಾವೇರಿ ನ್ಯಾಯಾಧಿಕರಣದ ತೀರ್ಪು ತಮಿಳುನಾಡಿನ ಪರವಾಗಿ ಬಂದಿದೆ. ಆದರೆ ನಾವು ಸುಮ್ಮನೆ ಕೂರುವುದಿಲ್ಲ. ಈಗಾಗಲೇ ನಾವು ಹಿರಿಯ ಕಾನೂನು ಸಲಹೆಗಾರರ ಬಳಿ ಚರ್ಚೆ ನಡೆಸಿದ್ದೇವೆ. ನಮ್ಮ ರಾಜ್ಯಕ್ಕೆ ಅದರಲ್ಲೂ ಮಂಡ್ಯ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಯೋಚಿಸುತ್ತಿದೆ ಎಂದು ಶಾಸಕ ಕದಲೂರು ಉದಯ್ ಹೇಳಿದರು.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ ಅಂತ್ಯಕ್ಕೆ ಕಾಂಗ್ರೆಸ್ ಸರ್ಕಾರ ಪತನ ವಾಗುತ್ತೆ ವಿಚಾರವಾಗಿ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿರುಕನ ಕನಸು ಕಾಣುತ್ತಿದ್ದಾರೆ. ರಾಜಕೀಯದ ನಿರುದ್ಯೋಗಿಗಳು ಈಗಾಗಲೇ ಎಲ್ಲಾ ಅಧಿಕಾರವನ್ನು ಕಳೆದುಕೊಂಡು ಮೂಲೆಗುಂಪಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯದಿಂದ ದೂರ ಸರಿದು ಹೋಗುತ್ತಾರೆ ಎಂದರು.
ಮಾಜಿ ಸಚಿವ ಸಿ ಟಿ ಯೋಗೇಶ್ವರ್ ಅವರು ಸರಿಯಾದ ಸಮಯದಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಳ್ಳದೆ ಅವರು ಸೋತು ರಾಜಕೀಯ ನಿರುದ್ಯೋಗಿಯಾಗಿದ್ದಾರೆ ಎಂದು ಜೆಡಿಎಸ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.