ಬೆಂಗಳೂರು: ಸಿನಿಮೀಯ ಶೈಲಿಯಲ್ಲಿ ಬಂದ ನಾಲ್ವರು ದರೋಡೆಕೋರರ ತಂಡ ಹಾಡಹಗಲೇ ಜ್ಯುವೆಲ್ಲರಿ ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ದರೋಡೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ೧೦:೪೫ರ ಸುಮಾರಿಗೆ ಘಟನೆ ನಡೆದಿದ್ದು, ಶಾಪ್ ಮಾಲೀಕ ಮನೋಜ್ ಲೋಹರ್ (೩೦) ಮೇಲೆ ಗುಂಡು ಹಾರಿಸಿರುವ ದುಷ್ಕರ್ಮಿಗಳು ೧ ಕೆ.ಜಿ ತೂಕದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.
ಬೆಳಗ್ಗೆ ೨ ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತ್ರಗಳ ಸಹಿತ ಬ್ಯಾಡರಹಳ್ಳಿ ವ್ಯಾಪ್ತಿಯ ವಿನಾಯಕ ಜ್ಯುವೆಲ್ಲರಿ ಶಾಪ್ ಬಳಿ ಬಂದ ಆರೋಪಿಗಳು, ಮಾಲೀಕ ಮನೋಜ್ ನನ್ನು ಬೆದರಿಸಿ ದರೋಡೆಗೆ ಯತ್ನಿಸಿದ್ದಾರೆ. ಮನೋಜ್ ತಡೆಯುವ ಪ್ರಯತ್ನ ಮಾಡಿದಾಗ ಆತನ ತೊಡೆಗೆ ಗುಂಡು ಹಾರಿಸಿ, ಶಾಪ್‌ನಲ್ಲಿದ್ದ ಒಂದು ಕೆ.ಜಿಯಷ್ಟು ಚಿನ್ನಾಭರಣ ದೋಚಿದ್ದಾರೆ.
ಬಂಗಾರ ದೋಚಿದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳನ್ನು ಮನೋಜ್ ತಡೆಯಲು ಯತ್ನಿಸಿದ್ದಾರೆ. ಆಗ ಎಚ್ಚೆತ್ತ ದುಷ್ಕರ್ಮಿಗಳು ತಾವು ತಂದಿದ್ದ ಒಂದು ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳು ಮನೋಜ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.