Sunday, April 20, 2025
Google search engine

Homeರಾಜ್ಯಅಮೆರಿಕ ಕಂಪನಿಗಳಿಂದ ರಾಜ್ಯದಲ್ಲಿ ₹25,000 ಕೋಟಿ ಹೂಡಿಕೆಗೆ ಆಸಕ್ತಿ: ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವದ್ವಯರ ಹೇಳಿಕೆ

ಅಮೆರಿಕ ಕಂಪನಿಗಳಿಂದ ರಾಜ್ಯದಲ್ಲಿ ₹25,000 ಕೋಟಿ ಹೂಡಿಕೆಗೆ ಆಸಕ್ತಿ: ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವದ್ವಯರ ಹೇಳಿಕೆ

ಬೆಂಗಳೂರು: ಅಮೆರಿಕ ಪ್ರವಾಸದ ವೇಳೆ ವಿವಿಧ ಕಂಪನಿಗಳ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅಲ್ಲಿನ ಕಂಪನಿಗಳಿಂದ ರಾಜ್ಯದಲ್ಲಿ ಸುಮಾರು 25,000 ಕೋಟಿ ರೂಪಾಯಿ (3 ಶತಕೋಟಿ ಡಾಲರ್) ಹೂಡಿಕೆ ಮಾಡುವ ಆಸಕ್ತಿ ಪ್ರಕಟವಾಗಿದೆ ಎಂದು  ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಹೇಳಿದರು.

ಅಮೆರಿಕಕ್ಕೆ 12 ದಿನಗಳ ವ್ಯಾಪಾರ ಉತ್ತೇಜನಾ ಪ್ರವಾಸ ತೆರಳಿದ್ದ ರಾಜ್ಯ ನಿಯೋಗದ ನೇತೃತ್ವ ವಹಿಸಿದ್ದ ಎಂ ಬಿ ಪಾಟೀಲ ಮತ್ತು ಪ್ರಿಯಾಂಕ್ ಖರ್ಗೆ ಅವರು ವಿಕಾಸಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ದೃಷ್ಟಿಯಿಂದ ಇದೊಂದು ಯಶಸ್ವಿ ಭೇಟಿಯಾಗಿದೆ ಎಂದರು.

ಸಚಿವ ಎಂ ಬಿ ಪಾಟೀಲ ಮಾತನಾಡಿ, ಕೆಲವು ಕಂಪನಿಗಳು ಹೊಸದಾಗಿ ರಾಜ್ಯದಲ್ಲಿ ಕಾರ್ಯಾಚರಣೆ ಯೋಜನೆ ಹೊಂದಿವೆ.‌ ಇನ್ನು ಕೆಲವು ಕಂಪನಿಗಳು ಈಗಾಗಲೇ ಇಲ್ಲಿ ಘಟಕಗಳನ್ನು ಹೊಂದಿದ್ದು, ತಮ್ಮ ಕಾರ್ಯಾಚರಣೆ ವಿಸ್ತರಿಸುವ ಪ್ರಸ್ತಾವ ಹೊಂದಿವೆ ಎಂದರು.

ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಈಗ ಕರ್ನಾಟಕ ಸೇರಿದಂತೆ ‌ದೇಶದ‌ ಬಹುತೇಕ  ರಾಜ್ಯಗಳು ನಡೆಸುತ್ತಿವೆ. ಇಂತಹ ಸಮಾವೇಶದ ಜೊತೆಗೆ ಹೊಸ ಉಪಕ್ರಮವೊಂದನ್ನು ಕೈಗೊಳ್ಳಬೇಕು ಎಂಬುದು ನಮ್ಮ ಆಲೋಚನೆಯಾಗಿತ್ತು. ಹೀಗಾಗಿ, ಉದ್ಯಮಿಗಳಿರುವ ಹಾಗೂ ಉದ್ಯಮ ಸಂಸ್ಥೆಗಳ ಜಾಗಕ್ಕೆ ನಾವೇ ಹೋಗಿ ನಮ್ಮಲ್ಲಿರುವ ಅನುಕೂಲತೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು  ವಿವರಿಸಿದರು.

ಅಮೆರಿಕದ ಪೂರ್ವ ಕರಾವಳಿಯಿಂದ ಹಿಡಿದು ಪಶ್ಚಿಮ ಕರಾವಳಿವರೆಗೆ ಪ್ರಯಾಣಿಸಿ ಬೇರೆ ಬೇರೆ ಕಂಪನಿಗಳ ಉನ್ನತ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಲಾಯಿತು.‌ ಈ ವೇಳೆ 27 ಮುಖಾಮುಖಿ ಸಭೆಗಳು ಮತ್ತು  9 ಸಂವಾದ ಗೋಷ್ಠಿಗಳು ಸೇರಿ ಒಟ್ಟು 36 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆವು. ಜೊತೆಗೆ, ಅಲ್ಲಿನ ಕೆಲವು ಕೈಗಾರಿಕೆಗಳ ಕಾರ್ಯಾಚರಣೆಯನ್ನು ಖುದ್ದು ವೀಕ್ಷಿಸಿದೆವು ಎಂದು ಹೇಳಿದರು.

ಮುಖ್ಯವಾಗಿ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್, ಏರೋಸ್ಪೇಸ್ & ರಕ್ಷಣೆ, ಆಟೋ/ಇವಿ, ಉತ್ಪಾದನೆ ಮತ್ತು ಮೆಡ್-ಟೆಕ್ ವಲಯಗಳಲ್ಲಿ ಹೂಡಿಕೆ ಅವಕಾಶಗಳನ್ನು ಅವಲೋಕಿಸಲಾಗಿದೆ. ಅಪ್ಲೈಡ್ ಮಟೀರಿಯಲ್ಸ್, ಎಎಂಡಿ, ಜುನಿಪರ್, ಗ್ಲೋಬಲ್ ಫೌಂಡ್ರೀಸ್, ಲ್ಯಾಮ್ ರಿಸರ್ಚ್, ಬೋಯಿಂಗ್, ಕ್ರಿಪ್ಪನ್, ಡೆಲ್, ಎಂಕೆಎಸ್ ಇನ್‌ಸ್ಟ್ರುಮೆಂಟ್ಸ್, ಟೆರಾಡೈನ್, ಜಿಇ ಹೆಲ್ತ್ ಕೇರ್, ಇಂಟೆಲ್‌ಸ್ಯಾಟ್, ಆರ್‌ಟಿಎಕ್ಸ್, ಟೆಕ್ಸಾಸ್ ಇನ್‌ ಸ್ಟ್ಯುಮೆಂಟ್ಸ್, ಆಪಲ್ ಮತ್ತು ವಾಟರ್ಸ್‌ ಕಾರ್ಪ್ ನಂತಹ ಮುಂಚೂಣಿ ಕಂಪನಿಗಳೊಂದಿಗೆ ವಿಚಾರ ವಿನಿಮಯ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ಜಂಟಿ ಕೌಶಲ್ಯಾಭಿವೃದ್ಧಿ ಉಪಕ್ರಮಗಳು, ಪೂರೈಕೆದಾರರ ನೆಲೆಯ ವಿಸ್ತರಣೆ, ಆರ್ & ಡಿ ಪರಿಸರ ವ್ಯವಸ್ಥೆ ಬಲಪಡಿಸುವುದು ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸುವ ಬಗೆಗೂ ಸಮಾಲೋಚನೆಗಳನ್ನು ನಡೆಸಲಾಗಿದೆ ಎಂದರು.

ಬದಲಾಗುತ್ತಿರುವ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಲ್ಲಿ ಅಮೆರಿಕದ ಉದ್ಯಮಿಗಳು ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಆಸಕ್ತಿ ಹೊಂದಿದ್ದಾರೆ. ಈ ಅವಕಾಶ ಬಳಸಿಕೊಳ್ಳುವ ದೃಷ್ಟಿಯಿಂದ ನಾವು ಇಲ್ಲಿನ ಕೈಗಾರಿಕಾ ಕಾರ್ಯಪರಿಸರ, ಉದ್ಯಮಸ್ನೇಹಿ ಕಾರ್ಯನೀತಿಗಳು, ಸರ್ಕಾರದ ಪ್ರೋತ್ಸಾಹಕ ಕ್ರಮಗಳು, ಮತ್ತು ಮಾನವ ಸಂಪನ್ಮೂಲ ಲಭ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಜೊತೆಗೆ, ಸುಗಮ ವ್ಯಾಪಾರ ಕಾರ್ಯಾಚರಣೆಗೆ ಪೂರಕವಾಗಿ ಸರ್ಕಾರದ ಸಹಕಾರವನ್ನು ಖಾತ್ರಿಗೊಳಿಸಿದ್ದೇವೆ ಎಂದು ಪಾಟೀಲ ಅವರು ಮಾಹಿತಿ ನೀಡಿದರು.

ವಿಷನ್ ಗ್ರೂಪ್:

ಕೈಗಾರಿಕಾ ಇಲಾಖೆಯು ಕ್ಷೇತ್ರವಾರು  ಒಂಬತ್ತು ವಿಷನ್ ಗ್ರೂಪ್ ಗಳನ್ನು ರಚಿಸಲಿದೆ ಸಚಿವ ಹೇಳಿದರು.

ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬಂಡವಾಳ ಆಕರ್ಷಿಸುವ ಸಲುವಾಗಿ ಹೊಸ ಹೊಸ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದು ಅದರಲ್ಲಿ ಈ ಅಮೆರಿಕಾ ಭೇಟಿ ಯೂ ಸೇರಿದೆ. ಮಾನವ ಸಂಪನ್ಮೂಲದ ಬೇಡಿಕೆಗಣುಗುಣವಾಗಿ ಎಂಜಿನಿಯರ್ ಗಳಿಗೆ ತರಬೇತಿ ನೀಡುವ ಸಂಬಂಧ ಎಎಂಡಿ ಸಂಸ್ಥೆ ಜತೆ‌ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಳ್ಳಲಿದೆ. ಈ ಸಂಸ್ಥೆ 800 ಎಂಜಿನಿಯರ್ ಗಳನ್ನು‌ ಭಾರತದಲ್ಲಿ ನೇಮಕ‌ ಮಾಡಿಕೊಳ್ಳಲಿದೆ ಎಂದು ಹೇಳಿದರು.

ನಾವೀನ್ಯತಾ ಸೂಚ್ಯಂಕ ದಲ್ಲಿ ಕರ್ನಾಟಕ18ನೇ ಸ್ಥಾನ‌ ಪಡೆದಿದ್ದು ಮುಂದಿನ‌ ದಿನಗಳಲ್ಲಿ 10ರೊಳಗೆ ಸ್ಥಾನ‌ ಪಡೆಯುವ ನಿಟ್ಟಿನಲ್ಲಿ ಕೆಲಸ‌ ಮಾಡಲಿದೆ ಎಂದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular