ಮೈಸೂರು: ಸರ್ಕಾರ ಗ್ರಾಮೀಣ ಭಾಗದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಲು ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕೆಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ. ಮರೀಗೌಡ ಒತ್ತಾಯಿಸಿದರು.
ಮೈಸೂರು ತಾಲ್ಲೂಕು ಡಿ. ಸಾಲುಂಡಿಯ ಸ್ಯಾಂಡಲ್‌ರೋಸ್ ಕಾನ್ವೆಂಟ್‌ನಲ್ಲಿ ಕನ್ನಡ ಜಾನಪದ ಪರಿಷತ್ ಮೈಸೂರು ಜಿಲ್ಲೆಯ ವತಿಯಿಂದ ನಡೆದ ವಿಶ್ವ ಜಾನಪದ ದಿನಾಚರಣೆ ಹಾಗೂ ವಿಶ್ವ ಬುಡಕಟ್ಟು ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಅವಿದ್ಯಾವಂತರಾದ ನಮ್ಮ ಹಿರಿಯರು ರಾಗಿ ಬೀಸುವಾಗ, ನಾಟಿ ಮಾಡುವಾಗ, ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದ ಜಾನಪದ ಹಾಡುಗಳು ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹೋಗಿ ಇಂಪಾಗಿ ಕೇಳಿಸುತ್ತಿದ್ದವು.
ಇಂದು ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಟಿ.ವಿ., ಮೊಬೈಲ್ ಬಂದ ಮೇಲೆ ಜಾನಪದ ಕಲೆ, ಕಲಾವಿದರು ಮರೆಯಾಗುತ್ತಿದ್ದಾರೆ ಎಂದ ಅವರು ಇಂದಿಗೂ ಜಾನಪದ ಹಾಡುಗಳನ್ನು ಕೇಳುವಾಗ ನಮ್ಮ ಮನಸ್ಸು ಉಲ್ಲಾಸಗೊಳ್ಳುತ್ತದೆ. ಮಲೆಮಹದೇಶ್ವರ ಹಾಡುಗಳು, ಮಂಟೇಸ್ವಾಮಿ ಹಾಡುಗಳು, ಜಾನಪದ ಕಲಾವಿದರ ಬಾಯಲ್ಲಿ ನಲಿದಾಡುತ್ತಿವೆ. ಆದ್ದರಿಂದ ಸರ್ಕಾರ ಜಾನಪದ ಕಲೆಯನ್ನು ಉಳಿಸಲು ಮುಂದಾಗಬೇಕು ಹಾಗೂ ಶಾಲಾ ಮಕ್ಕಳಿಗೆ ಜಾನಪದ ಗೀತೆ, ಕಲೆಯ ಬಗ್ಗೆ ತರಬೇತಿಯನ್ನು ನೀಡಬೇಕು ಎಂದರು.
ಸಮಾರಂಭದಲ್ಲಿ ಸಾಹಿತಿ ಬನ್ನೂರು ಕೆ. ರಾಜು, ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಬಸವೇಶ್ವರ ಎಜ಼ುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಶೋಭಾಶಿವರಾಜು, ಸಮಾಜ ಸೇವಕರಾದ ರಘುರಾಮ್ ವಾಜಪೇಯಿ, ಡಾ. ಬೇಸೂರು ಮೋಹನ್ ಪಾಳೇಗಾರ್, ಡಾ. ವಿನೋದ್, ಕಾರ್ಯದರ್ಶಿ ದೊರೆಸ್ವಾಮಿ, ಶಿವಕುಮಾರ್ ಹಾಜರಿದ್ದರು. ಇದೇ ಸಂದರ್ಭದಲ್ಲಿ ಸೋಬಾನೆ ಹಾಡುಗಾರರಾದ ಚಿಕ್ಕಹೆಣ್ಣಮ್ಮ, ರೇವಮ್ಮ, ಮಹಾದೇವಪ್ಪ, ಚಂದ್ರ, ಗಂಗಮ್ಮ, ಹರ್ಷ, ಲಿಂಗಪ್ಪ, ಕೃಷ್ಣಮೂರ್ತಿ, ಕೆ.ಎಸ್.ಆರ್.ಟಿ.ಯ ಜವರೇಗೌಡರನ್ನು ಸನ್ಮಾನಿಸಲಾಯಿತು.