ರಾಮನಗರ: ದೇಶದಲ್ಲಿ ೪೦ ಕೋಟಿಗೂ ಹೆಚ್ಚು ಯುವಕರಿದ್ದಾರೆ. ಯುವಕರು ಹೆಚ್ಚು ಸದೃಢರಾಗಬೇಕು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದರು. ಅವರು ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಜಿಲ್ಲಾಡಳಿತ, ರಾಮನಗರ ಪ್ರಥಮ ದರ್ಜೆ ಕಾಲೇಜಿನ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಓದಿನ ಜೊತೆಗೆ ಮಕ್ಕಳು ಪ್ರತಿನಿತ್ಯ ೨ ಗಂಟೆಗಳ ಕಾಲ ಆಟವಾಡಬೇಕು. ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಬೇಕು. ಅವರಲ್ಲಿರುವ ಪ್ರತಿಭೆಗಳನ್ನು ಹೊರತರಬೇಕು ಎಂದರು. ಹಿಂದಿನ ಕಾಲದಲ್ಲಿ ೪ ತರಗತಿ ಸೇರಿ ಒಂದು ತರಗತಿಯನ್ನಾಗಿ ಮಾಡಿ ಅಲ್ಲಿಗೆ ಒಬ್ಬರು ಶಿಕ್ಷಕರನ್ನು ನೇಮಕಮಾಡಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು.
ನಂತರ ಒಂದು ತರಗತಿಗೆ ಒಬ್ಬರು ಶಿಕ್ಷಕರನ್ನಾಗಿ ನೇಮಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಯೋಜನೆಯನ್ನು ರಾಜೀವ್ ಗಾಂಧಿ ಅವರು ಜಾರಿಗೆ ತಂದರು. ಇದರಿಂದಾಗಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ಕೆ. ಸುರೇಶ್ ಅವರು ಮಾತನಾಡಿ, ಯುವಕರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಯುವ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಲೆ, ಸಾಹಿತ್ಯ, ಕ್ರೀಡೆ ಹಾಗೂ ಯುವಕರಲ್ಲಿರುವ ಪ್ರತಿಭೆಯನ್ನು ಹೊರತರಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು. ಪೋಷಕರು ಮಕ್ಕಳನ್ನು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಡಬಾರದು.
ಇದರಿಂದಾಗಿ ಯುವಕರಿಗೆ ಹಾಗೂ ಕ್ರೀಡಾಪಟುಗಳಿಗೆ ಉಪಯೋಗವಾಗುತ್ತದೆ ಎಂದರು. ಯುವಕರಿಗೆ ಹೆಚ್ಚು ಪ್ರೋತ್ಸಾಹ ನೀಡುವುದರಿಂದ ದೇಶವು ಅಭಿವೃದ್ಧಿಯಾಗುತ್ತದೆ ಎಂದರು. ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ. ಬಾಲಕೃಷ್ಣ ಅವರು ಮಾತನಾಡಿ, ಯುವಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡು, ಯುವಕರಲ್ಲಿರುವ ಪ್ರತಿಭೆಗಳನ್ನು ಹೊರತಂದು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುವಂತೆ ತಿಳಿಸಿದರು.
ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಕಲೆ, ಸಾಹಿತ್ಯ, ಕ್ರೀಡೆಗಳು ಸಹ ಮುಖ್ಯವಾಗಿರುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದಾಗಿದೆ. ಯುವಕರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿಕೊಳ್ಳಬಹುದಾಗಿದೆ ಎಂದರು. ಯುವ ಉತ್ಸವ ಕಾರ್ಯಕ್ರಮದಲ್ಲಿ ಯುವಕರಿಗಾಗಿ ಭಾಷಣ ಸ್ಪರ್ಧೆ, ಸಾಂಸ್ಕೃತಿಕ, ಮೊಬೈಲ್ ಛಾಯಾಗ್ರಹಣ, ಚಿತ್ರಕಲೆ, ರಂಗೋಲಿ ಬಿಡಿಸುವುದು ಹಾಗೂ ಕವನ ಬರೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಯುವಕರು ಇದರಲ್ಲಿ ಪಾಲ್ಗೊಂಡು ವಿಜೇತರಾಗುವಂತೆ ತಿಳಿಸಿದರು.
ನೆಹರು ಯುವ ಕೇಂದ್ರದ ನಿರ್ದೇಶಕರಾದ ಎಂ.ಎನ್. ನಟರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆ ವತಿಯಿಂದ ನಿರ್ಮಿಸಿರುವ ಸ್ಟಾಲ್‌ಗಳಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ರಾಮನಗರ ನಗರಸಭೆ ಅಧ್ಯಕ್ಷರಾದ ವಿಜಯ ಕುಮಾರಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಪೊಲೀಸ್ ಅಧೀಕ್ಷಕರಾದ ಸುರೇಶ್ ಟಿ.ವಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.
