ಚಿತ್ರದುರ್ಗ: ಬರ ಪರಿಹಾರದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರೂಟ್ಸ್ ತಂತ್ರಾಂಶದಲ್ಲಿರುವ ಅಂಕಿ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ, ರೈತರು ತಮ್ಮ ಜಮೀನಿನ ನಿಖರವಾದ ವಿಸ್ತೀರ್ಣವನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಆಧಾರ್-ಪಹಣಿ ಜೋಡಣೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಸರ್ಕಾರ ಈಗಾಗಲೆ ಬರ ಪೀಡಿತ ಪ್ರದೇಶವೆಂದು ಘೋಷಿಸಿದೆ. ಜಿಲ್ಲೆಯಲ್ಲಿ ಒಟ್ಟು 610353 ಕೃಷಿ ಯೋಗ್ಯ ತಾಕುಗಳಿದ್ದು (ಸರ್ವೆ ನಂಬರ್/ ಪೋಡುಗಳು), ಇವುಗಳಲ್ಲಿ ಈಗಾಗಲೆ 404845 ತಾಕುಗಳನ್ನು ಫ್ರುಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಲಾಗಿರುತ್ತದೆ. ಇನ್ನೂ 205508 ತಾಕುಗಳ ಜೋಡಣೆ ಕಾರ್ಯ ಬಾಕಿ ಉಳಿದಿರುತ್ತದೆ. ಜಿಲ್ಲೆಯಲ್ಲಿ ಒಟ್ಟು 307160 ರೈತರು 404845 ಸರ್ವೆ ನಂಬರುಗಳನ್ನು ಫ್ರುಟ್ಸ್ ತಂತ್ರಾಂಶದಡಿ ಜೋಡಣೆ ಮಾಡಿಸಿ, ವಿಶಿಷ್ಟ ಗುರುತಿನ ಸಂಖ್ಯೆ (ಎಫ್.ಐ.ಡಿ) ಪಡೆದಿದ್ದಾರೆ. ಉಳಿದಂತೆ 205508 ತಾಕುಗಳನ್ನು (ಸರ್ವೆ ನಂಬರ್/ ಪೋಡುಗಳು) ಜೋಡಣೆ ಮಾಡಿಸಿಕೊಳ್ಳಲು ಬಾಕಿ ಇದ್ದು, ರೈತರು ಶೀಘ್ರ ಜೋಡಣೆ ಮಾಡಿಸಿಕೊಳ್ಳಬೇಕು.
ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ನಷ್ಟ ವಿವರವನ್ನು ನಮೂದಿಸಿ, ಅದಕ್ಕನುಗುಣವಾಗಿ ಪರಿಹಾರ ಮೊತ್ತ ನೀಡುವ ವ್ಯವಸ್ಥೆ ಇತ್ತು. ಸರ್ಕಾರವು 2023 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ, ಈಗಾಗಲೆ ಫ್ರುಟ್ಸ್ ನಲ್ಲಿ ನೊಂದಣಿಯಾಗಿರುವ 307160 ರೈತರು ತಮ್ಮ ಜಮೀನಿನ ಯಾವುದೇ ಸರ್ವೆ ನಂಬರ್ ಬಿಟ್ಟುಹೋಗದಂತೆ, ಎಲ್ಲಾ ಸರ್ವೆ ನಂಬರ್‍ಗಳನ್ನು ನೊಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಇದುವರೆಗೂ ಫ್ರುಟ್ಸ್ ನಲ್ಲಿ ನೊಂದಣಿ ಆಗದೇ ಇರುವ ರೈತರು ಆಧಾರ್ ಕಾರ್ಡ್, ಪಹಣಿ, ಜಾತಿ ಪ್ರಮಾಣಪತ್ರ ಮತ್ತು ಬ್ಯಾಂಕ್ ಪಾಸ್ ಪುಸ್ತಕ ವಿವರಗಳನ್ನು ಫ್ರುಟ್ಸ್‍ನಲ್ಲಿ ದಾಖಲಿಸಿಕೊಂಡು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ವಿವಿಧ ಇಲಾಖೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಕೋರಲಾಗಿದೆ.
ಜಿಲ್ಲೆಯಾದ್ಯಂತ 15 ದಿನಗಳ ಕಾಲ ಫ್ರುಟ್ಸ್ ನೊಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಕೂಡಲೆ ಜೋಡಣೆ ಮಾಡಲು ಆಯಾ ಗ್ರಾಮದ ಗ್ರಾಮ ಆಡಳಿತಾಧಿಕಾರಿಗಳು, ನಾಡ ಕಚೇರಿ, ರೈತ ಸಂಪರ್ಕ ಕೇಂದ್ರ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ತಿಳಿಸಿದ್ದಾರೆ.