Saturday, April 19, 2025
Google search engine

Homeಸ್ಥಳೀಯಮನುಷ್ಯತ್ವದಿಂದ ದೇವರಾದ ರಾಜೇಂದ್ರ ಶ್ರೀಗಳು:ಸಾಹಿತಿ ಬನ್ನೂರು ರಾಜು

ಮನುಷ್ಯತ್ವದಿಂದ ದೇವರಾದ ರಾಜೇಂದ್ರ ಶ್ರೀಗಳು:ಸಾಹಿತಿ ಬನ್ನೂರು ರಾಜು

ಮೈಸೂರು: ದೇವರು ಎಲ್ಲೂ ಇರೋದಿಲ್ಲ, ಮನುಷ್ಯತ್ವ ಇರುವಲ್ಲಿ ದೇವರಿರುತ್ತಾನೆಂಬುದಕ್ಕೆ ನಮ್ಮ ಕಣ್ಮುಂದಿನ ಸತ್ಯವಾಗಿ ಬದುಕಿ ಅದೆಷ್ಟೋ ಮಂದಿಯ ಬದುಕಿಗೆ ಅಕ್ಷರಶಃ ದೇವರೇ ಆಗಿದ್ದ ಸುತ್ತೂರು ಶ್ರೀ ಮಠದ ಇಪ್ಪತ್ಮೂರನೆಯ ಜಗದ್ಗುರುಗಳಾಗಿದ್ದ ಶ್ರೀಶಿವರಾತ್ರಿ ರಾಜೇಂದ್ರಮಹಾ ಸ್ವಾಮೀಜಿಗಳು ಮನುಷ್ಯತ್ವ ದಿಂದ ದೈವತ್ವಕ್ಕೇರಿದವರೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.
ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಆಯೋಜಿಸಿದ್ದ ಶ್ರೀ ಮನ್ಮಹಾರಾಜ ರಾಜಗುರು ತಿಲಕ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ 108ನೇ ಜಯಂತಿ ಮಹೋತ್ಸವ ಮತ್ತು ‘ಶ್ರೀ ಶಿವರಾತ್ರಿರಾಜೇಂದ್ರ ಸದ್ಭಾವನಾ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಪೂಜ್ಯ ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,”ಸ್ವಾಮೀಜಿಗಳನ್ನು ಮಾಡಬಾರದು ಸ್ವಾಮೀಜಿಗಳು ಆಗಬೇಕು” ಎಂಬ ಮಾತಿಗೆ ತಕ್ಕಂತೆ ಸತ್ಯವಾಗಿಯೂ ನಿಜದ ಸ್ವಾಮೀಜಿಗಳಾಗಿದ್ದರೆಂದರು.
ಮಾತೃಹೃದಯದ ಮಹಾ ತಾಯಿಯಾಗಿ, ಕಾಯಕ ಮನಸ್ಸಿನ ಮಹಾ ತಂದೆಯಾಗಿ, ಜ್ಞಾನಾಕ್ಷಿಯ ಮಹಾ ಗುರುವಾಗಿ ನೂರಾರು, ಸಾವಿರಾರು ಬಡ ಮಕ್ಕಳಿಗೆ ಅನ್ನವಿಟ್ಟು ಅಕ್ಷರ ಕಲಿಸಿ ಎಲ್ಲರ ಬಾಳು ಬೆಳಗಿ ಬದುಕಿದ್ದಾಗಲೇ ದಂತಕಥೆ ಆಗಿದ್ದವರು ತ್ರಿವಿಧ ದಾಸೋಹಿ ಸಂತ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಅವರು ಅಕ್ಷರಶಃ ಜಗದ್ಗುರುಗಳೇ ಆಗಿದ್ದರು. ಇವರಿಂದಾಗಿ ಕಲಿತವರು, ಕಲಿತು ಬದುಕು ಕಟ್ಟಿಕೊಂಡವರು, ಬದುಕಿನಾಚೆಗೂ ಹೋಗಿ ನಾಡು ಕಟ್ಟಿದವರು, ನಾಡಿನಾಚೆಗೂ ಜಿಗಿದು ದೇಶಕಟ್ಟಿದವರು, ದೇಶದಿಂದಾಚೆಗೂ ಹಾರಿ ಜಗತ್ತು ಕಟ್ಟಿದವರು ಬಹಳಷ್ಟಿದ್ದಾರೆ. ಅವರೆಲ್ಲರಿಗೂ ಜೀವಧಾತು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು. ಇವತ್ತು ಜಗದಗಲ, ಮುಗಿಲಗಲ, ಭುವಿಯಗಲ, ಬಾನಗಲ ಬೆಳೆದು ಹರಡಿ ನಿಂತಿರುವ ಜಗದ್ವಿಖ್ಯಾತ ಸುತ್ತೂರು ಶ್ರೀ ಮಠದ ಸರ್ವಾಂಗೀಣ ಅಭ್ಯುದಯದ ತಾಯಿ ಬೇರು ಸಹ ಇವರೇ ಎಂಬುದು ಸತ್ಯಸ್ಯ ಸತ್ಯ. ಇದೆಲ್ಲಕ್ಕೂ ಮೂಲಧಾತು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಲ್ಲಿದ್ದ ದೂರದೃಷ್ಟಿ ಹಾಗೂ ಕ್ರಿಯಾಶೀಲತೆ ಮತ್ತು ಧೀಶಕ್ತಿ. ಎಲ್ಲಕ್ಕಿಂತ ಮಿಗಿಲಾಗಿ ಎಲ್ಲರಲ್ಲೂ ತನ್ನವರನ್ನು ಕಾಣುವ ಅವರೊಳಗಿದ್ದ ಮಹಾಮಾನವೀಯತೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಶಿಕ್ಷಣದ ಮಹತ್ವ ಅರಿತಿದ್ದ ಅವರು ಸ್ಥಾಪಿಸಿದ ಉಚಿತ ವಿದ್ಯಾರ್ಥಿನಿಲಯಗಳು ಮತ್ತು ಜ್ಞಾನ ದಾಸೋಹದ ಶಿಕ್ಷಣ ಸಂಸ್ಥೆಗಳು.

ಎಂಥಾ ಸಂಕಷ್ಟ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಗುರುದೇವರಾಗಿ ಅವರು ಕಾಪಾಡುತ್ತಿದ್ದರು. ಅದಕ್ಕೇ ಅವರನ್ನು ನಂಬಿ ಬಂದವರಿಗೆ ಕಲಿಯುಗದ ಕಾಮಧೇನು ಎಂತಲೂ, ಬೇಡಿ ಬಂದವರನ್ನು ಕೈಬಿಡದ ಕಲ್ಪವೃಕ್ಷ ಎಂತಲೂ ಜನ ಭಕ್ತಿಯಿಂದ ಕರೆದು ಅಪರಿಮಿತ ಅಭಿಮಾನದಿಂದ ಪೂಜಿಸುತ್ತಿದ್ದರೆಂದು ಬನ್ನೂರು ರಾಜು ಹೇಳಿದರು. ಸಮಾರಂಭದಲ್ಲಿ ವಿವಿಧ ಕೇತ್ರ ಗಳಲ್ಲಿ ಗಣನೀಯ ಸಾಧನೆ ಮಾಡಿರುವ ಪ್ರತಿಧ್ವನಿ ಪ್ರಸಾದ್ (ಸಹಕಾರ),ಸಿದ್ದರಾಜು(ಸಿನಿಮಾ), ಆಲನಹಳ್ಳಿ ಪುಟ್ಟಸ್ವಾಮಿ (ಸಮುದಾಯ ಮತ್ತು ಸಂಘಟನೆ), ಗೌತಮ್ (ಸಮಾಜ ಸೇವೆ ), ಮಾದೇಶ್(ಸಮುದಾಯ ಸೇವೆ), ಡಾ.ಲೀಲಾ ಪ್ರಕಾಶ್ (ಸಾಹಿತ್ಯ) ಅವರುಗಳಿಗೆ ‘ಶ್ರೀ ಶಿವರಾತ್ರಿ ರಾಜೇಂದ್ರ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಲೇಖಕಿ ಡಾ.ಲೀಲಾಪ್ರಕಾಶ್, ಸಮಾಜ ಸೇವಕ ಮಾದೇಶ್ ಅವರುಗಳು ಮಾತನಾಡಿದರು.ಜೆಎಸ್ಎಸ್ ಮಹಿಳಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹೆಚ್. ಬಿ. ಶ್ರೀಧರ್ ನುಡಿನಮನ ಸಲ್ಲಿಸಿ ರಾಜೇಂದ್ರ ಶ್ರೀಗಳ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು.ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಕೃತಿ ಚಿಂತಕ ಡಾ.ರಘುರಾಮ್ ವಾಜಪೇಯಿ ಅವರು ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಅಭಿನಂದಿಸಿದರು. ಮುಖ್ಯ ಅತಿಥಿಗಳಾಗಿ ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಮಾಲಂಗಿ ಸುರೇಶ್, ಚಿತ್ರ ನಟ ಸುಪ್ರೀತ್, ಸಮಾಜಸೇವಕಿ ವಿದ್ಯಾ, ಅಖಿಲ ಕರ್ನಾಟಕ ವೀರ ಶೈವ ಲಿಂಗಾಯತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲ್.ರುದ್ರಮೂರ್ತಿ ಮುಂತಾದವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಕು.ನಯನಾ ಪ್ರಾರ್ಥಿಸಿದರೆ ಬಿಗ್ ಬಾಸ್ ಖ್ಯಾತಿಯ ಮಾತನಾಡುವ ಗೊಂಬೆ ಕಲಾವಿದೆ ಸುಮಾರಾಜ್ ಕುಮಾರ್ ಅವರು ಇಡೀ ಕಾರ್ಯಕ್ರಮವನ್ನು ಆಕರ್ಷಣೀಯವಾಗಿ ಅಚ್ಚುಕಟ್ಟಾಗಿ ನಿರೂಪಿಸಿದರು.

RELATED ARTICLES
- Advertisment -
Google search engine

Most Popular