ಕೆ.ಆರ್.ನಗರ: ತಾಲೂಕಿನ ತಿಪ್ಪೂರು ಗ್ರಾಮದ ಶ್ರೀ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿರುವುದರಿಂದ ಕಳೆದ ೩ ವರ್ಷಗಳಿಂದ ರಥೋತ್ಸವ ನಡೆದಿಲ್ಲ. ಈ ಬಾರಿಯ ರಥೋತ್ಸವದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ರಥೋತ್ಸವ ನಡೆಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಗುರುವಾರ ತಿಪ್ಪೂರು ಗ್ರಾಮದ ದೇವಾಲಯದ ಆವರಣದಲ್ಲಿ ಗ್ರಾಮಸ್ಥರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆ ನಂತರ ಮಾತನಾಡಿದ ಶಾಸಕರು ೨೦೧೯ರಲ್ಲಿ ಪುರಾತತ್ವ ಇಲಾಖೆ ವತಿಯಿಂದ ೨.೩೮ ಕೋಟಿ ಲಕ್ಷ ರೂಗಳಲ್ಲಿ ಜಿರ್ಣೋದ್ದಾರ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ನಿಗಧಿತ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗದೆ ಅರ್ಧಕ್ಕೆ ನಿಂತಿರುವುದರಿಂದ ರಥೋತ್ಸವ ನಡೆಸಲು ಸಾಧ್ಯವಾಗಿಲ್ಲ ಎಂದರು.
ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿರುವ ದೇವಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿ ರಥೋತ್ಸವ ನಡೆಸಬೇಕು ಎಂದು ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದ ಶಾಸಕ ಡಿ.ರವಿಶಂಕರ್ ಮುಂದುವರೆದ ಕಾಮಗಾರಿಗಾಗಿ ೧.೧೦ ಕೋಟಿ ಅಂದಾಜು ಪಟ್ಟಿ ತಯಾರಿಸಿದ್ದು ಶೀಘ್ರದಲ್ಲೇ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ದೇವಸ್ಥಾನಗಳ ಜೀರ್ಣೋದ್ದಾರ ಮಾಡುವ ಸಂದರ್ಭದಲ್ಲಿ ಈಶಾನ್ಯ ಮೂಲೆಯಿಂದ ಕಾಮಗಾರಿ ಆರಂಭಿಸಬೇಕು ಆಗ ಮಾತ್ರ ದೇವಾಲಯದ ಕೆಲಸ ಸುಲಲಿತವಾಗಿ ನಡೆಯುವುದರ ಜತೆಗೆ ಗ್ರಾಮಕ್ಕೂ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯ ಪಟ್ಟ ಶಾಸಕರು ಇದಕ್ಕೆ ತದ್ವಿರುದ್ದವಾಗಿ ಕೆಲಸ ಮಾಡಿರುವುದರಿಂದ ತೊಂದರೆಯಾಗಿದೆ ಇದನ್ನು ಸರಿಪಡಿಸಲು ಅಕ್ಟೋಬರ್ ೧೬ರಂದು ಸೋಮವಾರದಿಂದ ಯಾಗ ಶಾಲೆಯ ಕಾಮಗಾರಿ ಪ್ರಾರಂಭಿಸುವAತೆ ಗುತ್ತಿಗೆದಾರರಿಗೆ ಸೂಚಿಸಿದರು.
ದೇವಾಲಯ ಆವರಣದ ನೆಲಹಾಸು, ಧ್ವಜಸ್ಥಂಭ, ರಥದ ಮನೆ ನಿರ್ಮಾಣ ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅಂದಾಜು ಪಟ್ಟಿ ತಯಾರು ಮಾಡಲಾಗಿದ್ದು ಅನುದಾನ ಮಂಜೂರಾದ ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮೂಲ ದೇವರ ಪ್ರತಿಷ್ಠಾಪನೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳನ್ನು ನಡೆಸಲು ಗ್ರಾಮಸ್ಥರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಪುರಾತತ್ವ ಇಲಾಖೆಯ ಎಇಇ ಮಮತ, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ತಿಪ್ಪೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು, ಸದಸ್ಯರಾದ ಶಿವಣ್ಣ, ಸತ್ಯನಾರಾಯಣ್, ವಿಎಸ್‌ಎಸ್‌ಎನ್ ಅಧ್ಯಕ್ಷ ಎಸ್.ಸಿದ್ದೇಗೌಡ, ಮುಖಂಡರಾದ ಮಂಜುನಾಥ್, ಗಂಗಾಧರ್, ಕುಮಾರ್, ತಿಪ್ಪೂರುರವಿ, ಮಂಜು, ರಾಜೇಗೌಡ, ಸಾನಂದ, ಸಾಹಿತಿಕೃಷ್ಣ, ಮಹದೇವನಾಯಕ, ರಾಜನಾಯಕ, ಶಿವಕುಮಾರ್, ದಿವಾಕರ್, ಪಿಡಿಒ ಭಾಸ್ಕರ್ ಮತ್ತಿತರರು ಹಾಜರಿದ್ದರು.