ಮೈಸೂರು: ಕೋಟಾ ಶಿವರಾಮ ಕಾರಂತರ ಸಾಹಿತ್ಯ ಎಲ್ಲಾ ಕಾಲಕ್ಕೂ ಸಲ್ಲುವಂತಹದು. ಆ ಬಾಲ ವೃದ್ದರಾದಿಯಾಗಿ ಎಲ್ಲರೂ ಕಾರಂತರನ್ನು ಅವರ ಸಾಹಿತ್ಯವನ್ನು ಇಷ್ಟಪಡುತ್ತಾರೆ ಎಂದು ಲೇಖಕಿ ಹಾಗು ಸಖಿ ಫೌಂಡೇಶನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್ ಸಂಸ್ಥಾಪನಾ ಕಾರ್ಯದರ್ಶಿ ಗಾಯತ್ರಿ ಸುಂದರೇಶ್ ಅಭಿಪ್ರಾಯಿಸಿದ್ದಾರೆ.
ನಗರದ ಛಾಯಾದೇವಿ ಮಕ್ಕಳ ಮನೆಯಲ್ಲಿ ಶ್ರೀ ವೀರಪ್ರತಾಪ ಆಂಜನೇಯ ಸ್ನೇಹಿತರ ಬಳಗ ಆಯೋಜಿಸಿದ್ದ “ಶಿವರಾಮ ಕಾರಂತರ ಕಥಾಸ್ಪರ್ಧೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಬಾಲವನದಲ್ಲಿ ಕಾರಂತಜ್ಜ ಎನ್ನುವ ಅಂಕಣದ ಮೂಲಕ ಕಾರಂತರು ಮಕ್ಕಳಿಗೆ ಅಜ್ಜನಾಗಿ ವಿಜ್ಞಾನದ ಸಾಹಿತ್ಯ ತಿಳುವಳಿಕೆ ಹೇಳಿದವರು ಎಂದರು.

ಸಂಘದ ಅಧ್ಯಕ್ಷರಾದ ಸ್ಕಂದ ರವರು ಆಶ್ರಮದ ಮಕ್ಕಳಿಗಾಗಿ ಡಾ.ಕೆ.ಶಿವರಾಮ ಕಾರಂತರ ಮಕ್ಕಳ ಕಥಾಪುಸ್ತಕಗಳನ್ನು ನೀಡಿ ಮಕ್ಕಳಿಂದ ಕಥೆ ಓದಿಸಿದರು.
ನಂತರ ನಡೆದ ಕಥಾ ಸ್ಪರ್ಧೆಯಲ್ಲಿ ಏಳನೇ ತರಗತಿಯ ನಿಸರ್ಗ, ಆರನೇ ತರಗತಿಯ ಶಾನ್ವಿ , ಅಮೂಲ್ಯ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗು ತೃತೀಯ ಬಹುಮಾನಗಳನ್ನು ಪಡೆದರು.
ಕಾರ್ಯಕ್ರಮದಲ್ಲಿ ಆಶ್ರಮದ ಸಿಬ್ಬಂದಿಗಳು ಮತ್ತು ಮಕ್ಕಳು ಭಾಗವಹಿಸಿದ್ದರು.