Monday, April 21, 2025
Google search engine

Homeರಾಜ್ಯಸುದ್ದಿಜಾಲಮಾನಸಿಕ ಆರೋಗ್ಯ ಕುರಿತು ಅರಿವು ಹೆಚ್ಚಬೇಕು: ಡಾ.ಸೆಲ್ವಮಣಿ ಆರ್

ಮಾನಸಿಕ ಆರೋಗ್ಯ ಕುರಿತು ಅರಿವು ಹೆಚ್ಚಬೇಕು: ಡಾ.ಸೆಲ್ವಮಣಿ ಆರ್

ಶಿವಮೊಗ್ಗ: ಮಾನಸಿಕ ಆರೋಗ್ಯದ ಕುರಿತಾದ ಅರಿವಿನ ಕೊರತೆಯಿಂದ ಖಿನ್ನತೆ, ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಮಾನಸಿಕ ಆರೋಗ್ಯ ಕುರಿತಾದ ಅರಿವು ಹೆಚ್ಚಬೇಕೆಂದು ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ ಇವರ ಸಂಯುಕ್ತಾಶ್ರದಯಲ್ಲಿ ‘ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ 2017 ರಡಿ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿ ಮತ್ತು ನ್ಯಾಯಕ ದಂಡಾಧಿಕಾರಿ ಹಾಗೂ ಪೊಲೀಸ್ ಪಾತ್ರದ ಕುರಿತು ಇಂದು ಮೆಗ್ಗಾನ್ ಬೋಧನಾ ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಮುಂದುವರೆದ ದೇಶಗಳು ಮಾತ್ರ ಮಾನಸಿಕ ಖಾಯಿಲೆಗಳಿಗೆ ಒತ್ತನ್ನು ನೀಡುತ್ತಿದ್ದವು. ನಮ್ಮ ದೇಶದಲ್ಲಿ ಮಾನಸಿಕ ಅಸಹಜತೆಗಳನ್ನು ಹುಚ್ಚು ಎಂದು ಕರೆಯಲಾಗುತ್ತಿತ್ತು. ಆದರೆ 2017 ರ ಮಾನಸಿಕ ಆರೋಗ್ಯ ಕಾಯ್ದೆಯಿಂದಾಗಿ ಮಾನಸಿಕ ಖಾಯಿಲೆ, ಅಸಹಜತೆಗಳನ್ನು ಗುರುತಿಸಿ, ಸಹಾಯ ಮಾಡುವ ಒಂದು ವ್ಯವಸ್ಥೆ ನಿರ್ಮಾಣವಾಗಿದೆ. ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮನೋವೈದ್ಯರು, ಆಪ್ತ ಸಮಾಲೋಚಕರು, ಪೊಲೀಸರ ಪಾತ್ರ ಹೆಚ್ಚಿರುತ್ತದೆ.

ಪ್ರಸ್ತುತ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚುತ್ತಿದ್ದು, ಒತ್ತಡದ ಪರಿಸ್ಥಿತಿಗಳನ್ನು ಅತಿ ಹೆಚ್ಚು ಎದುರಿಸುವ ಕ್ಷೇತ್ರಗಳಾದ ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಮಾನಸಿಕವಾಗಿ ಆರೋಗ್ಯವಾಗಿರಬೇಕು. ಆಗ ಮಾತ್ರ ನಾವು ಧನಾತ್ಮಕವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ. ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ನಾವು ಸದೃಢವಾಗಿಟ್ಟುಕೊಂಡರೆ ಸಮಾಜಕ್ಕೆ ಉತ್ತಮ ಕೊಡುಗೆ ಕೊಡಲು ಸಾಧ್ಯ. ಆದ್ದರಿಂದ ವೈದ್ಯರು, ಪೊಲೀಸ್ ಹಾಗೂ ಇತರೆ ಒತ್ತಡ ನಿರ್ವಹಿಸುವ ವಿಭಾಗದವರು ತಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಹಾಗೂ ಇಂದಿನ ಕಾರ್ಯಾಗಾರದಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಬಗ್ಗೆ ತಿಳಿದು ಅದನ್ನು ಅನುಷ್ಟಾನಕ್ಕೆ ತರುವ ಪ್ರಯತ್ನ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಎನ್.ಚಂದನ್ ಮಾತನಾಡಿ, ಮಾನಸಿಕ ಆರೋಗ್ಯ ಇಲ್ಲದ ಆರೋಗ್ಯ ಮತ್ತು ಸಂಪತ್ತು ಉಪಯೋಗವಿಲ್ಲದ್ದು. ದೈಹಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಅದೇ ರೀತಿಯಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರದಲ್ಲೂ ಆಗಬೇಕಿದೆ. ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಮುಖ್ಯವಾಗಿದ್ದು, ಮಾನಸಿಕ ಅಸಹಜತೆ, ಅಸ್ವಸ್ಥತೆಯನ್ನು ಗುರುತಿಸಿ, ಚಿಕಿತ್ಸೆ ನೀಡುವುದು ತುಂಬಾ ಮುಖ್ಯ. ಮಾನಸಿಕ ಅಸ್ವಸ್ಥರಿಗೆ ಅವಮಾನ, ತಾರತಮ್ಯ ಸಲ್ಲದು. ಓರ್ವ ಗಸ್ತು ಪೊಲೀಸ್ ಕೂಡ ತಿರುಗಾಡುತ್ತಿರುವ ಮಾನಸಿಕ ಅಸ್ವಸ್ಥನನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರೆ, ಅವರು ಉಚಿತ ಚಿಕಿತ್ಸೆಗೆ ಆದೇಶ ನೀಡುತ್ತಾರೆ. ಹೀಗೆ ಒಬ್ಬರ ಜೀವನ ಉತ್ತಮಪಡಿಸುವ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು.

ಜಿಲ್ಲಾ ಮಾನಸಿಕ ಮತ್ತು ಕುಷ್ಟರೋಗ ನಿವಾರಣಾ ಕಾರ್ಯಕ್ರಮ ಅನುಷ್ಟಾನಾಧಿಕಾರಿ ಡಾ.ಕಿರಣ್ ಸ್ವಾಗತಿಸಿದರು. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಸಿಮ್ಸ್ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಸಿಮ್ಸ್ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ರಾಮ್‍ಪ್ರಸಾದ್ ಕೆ ಎಸ್, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗದ ಡಿಹೆಚ್‍ಓ ಹಾಗೂ ಜಿಲ್ಲಾ ಕುಷ್ಟರೋಗ ನಿವಾರಣಾ ಕಾರ್ಯಕ್ರಮಾಧಿಕಾರಿಗಳು, ನಗರದ ಮನೋವೈದ್ಯರು, ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular