ಮಂಗಳೂರು(ದಕ್ಷಿಣ ಕನ್ನಡ): ಫೆಲೆಸ್ತೀನ್ ನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ನರಮೇಧ ದಾಳಿಯನ್ನು ಬೆಂಬಲಿಸಿದ್ದಾರೆ ಎನ್ನಲಾದ ಮಂಗಳೂರಿನ ವ್ಯಕ್ತಿಯ ವಿಡಿಯೋ ಇದೀಗ ವೈರಲ್ ಆಗಿದ್ದು ವಿರೋಧಕ್ಕೆ ಕಾರಣವಾಗಿದೆ. ಈ ವ್ಯಕ್ತಿ ಹಮಾಸ್ ಉಗ್ರರನ್ನು ದೇಶ ಪ್ರೇಮಿಗಳೆಂದು ಕರೆದಿದ್ದಾನೆ.
ವಿಡಿಯೋ ಮೂಲಕ ಬೆಂಬಲಿಸಿದ ವ್ಯಕ್ತಿಯನ್ನು ಮಂಗಳೂರು ಮೂಲದ ಝಾಕಿರ್ ಎಂದು ಗುರುತಿಸಲಾಗಿದೆ. ಇವರು ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟಿದ್ದಾನೆ. ಹಮಾಸ್ ಉಗ್ರರ ವಿಜಯಕ್ಕೆ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದ್ದು, ಪ್ಯಾಲೇಸ್ತೀನ್, ಗಾಜಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲು ಪ್ರಾರ್ಥಿಸುವಂತೆ ಕರೆ ನೀಡಿದ್ದಾನೆ. ಅಲ್ಲದೇ ಹಮಾಸ್ ಉಗ್ರರನ್ನು ದೇಶ ಪ್ರೇಮಿ ಯೋಧರೆಂದು ಬಣ್ಣಿಸಿ ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಈತನ ವಿವಾದಾತ್ಮಕ ಹೇಳಿಕೆಯ ವೀಡಿಯೋ ವೈರಲ್ ಆಗಿದೆ. ಝಾಕಿರ್ ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬನ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ವೀಡಿಯೋಗೆ ಹಿಂದೂ ಸಂಘಟನೆಗಳಿಂದಲೂ ವಿರೋಧ ವ್ಯಕ್ತವಾಗಿದ್ದು,
ಈ ಕುರಿತು ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್, ಉಗ್ರರಿಗೆ ಬೆಂಬಲ ಕೊಡುವ ಇವನ ಮೇಲೆ ಮಂಗಳೂರು ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಿ. ಅಧಿಕಾರಿಗಳೇ ದೇಶಪ್ರೇಮಿಗಳು ಎಚ್ಚೆತುಗೊಂಡು ಕಾನೂನು ಕೈಗೆತಿಕೊಳ್ಳಲು ಅವಕಾಶ ಮಾಡ ಕೊಡಬೇಡಿ. ಕೂಡಲೇ ಇವನ ಬಂಧನ ವಾಗಲಿ ಎಂದು ಆಗ್ರಹಿಸಿದ್ದಾರೆ. ಇದರ ಜೊತೆಗೆ ಮಂಗಳೂರಿನ ಬಂದರ್ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ನೀಡಿದ ದೂರಿನಂತೆ ದೂರು ದಾಖಲಾಗಿದೆ.