ಉಡುಪಿ: ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ತುಂಬಾ ಸಮಸ್ಯೆ ಇದೆ. ಒಂದು ವಾರದ ಒಳಗೆ ಸಮಸ್ಯೆ ಬಗೆ ಹರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಬಯಲು ಸೀಮೆ ಕಡೆ ಕೂಡಾ ಸಮಸ್ಯೆ ಬಹಳ ಇದೆ ಅದನ್ನು ಸರಿಪಡಿಸಬೇಕು ಎಂಬುದು ಸರ್ಕಾರದ ಉದ್ದೇಶ. ಶೀಘ್ರದಲ್ಲೇ ಲೋಡ್ ಶೆಡ್ಡಿಂಗ್ ಸಮಸ್ಯೆ ಸರಿಪಡಿಸುತ್ತೇವೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ಜಿಲ್ಲೆಯಿಂದ ವಿದ್ಯುತ್ ಖರೀದಿ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ದುಬಾರಿಯಾದರೂ ವಿದ್ಯುತ್ ಖರೀದಿ ಮಾಡಲೇಬೇಕಾಗುತ್ತದೆ ಎಂದಿದ್ದಾರೆ.
ಕುಟುಂಬದವರನ್ನು ರಾಜಕೀಯ ಸ್ಪರ್ಧೆಗಿಳಿಸುವ ಬಗ್ಗೆ ಆಲೋಚನೆ ಮಾಡಿಲ್ಲ: ಸಚಿವ ಚೆಲುವರಾಯಸ್ವಾಮಿ ಪತ್ನಿಗೆ ಮಂಡ್ಯ ಎಂಪಿ ಟಿಕೆಟ್ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನನ್ನ ಕುಟುಂಬದವರನ್ನು ರಾಜಕೀಯದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಆಲೋಚನೆ ಮಾಡಿಲ್ಲ. ಅಭ್ಯರ್ಥಿ ಯಾರೆಂದು ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ. ಸ್ನೇಹಿತರು ಪಕ್ಷದ ಮುಖಂಡರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂತ್ರಿಗಳ ಕುಟುಂಬದಲ್ಲೇ ಒಬ್ಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದಾರೆ. ಅವರ ಅಭಿಪ್ರಾಯ ತಪ್ಪು ಎಂದು ನಾನು ಹೇಳಕ್ಕಾಗಲ್ಲ. ಕುಟುಂಬದ ಒಬ್ಬರಿಗೆ ಅಭ್ಯರ್ಥಿತನ ಕೊಡಬೇಕು ಎಂದು ಅವರ ಅಭಿಪ್ರಾಯ ನಾನು ಈವರೆಗೆ ಆಲೋಚನೆ ಮಾಡಿಲ್ಲ. ಹೈಕಮಾಂಡ್ ಪಕ್ಷದ ಲೀಡರ್‌ಗಳು ಎಲ್ಲರೂ ಕುಳಿತು ತೀರ್ಮಾನ ಮಾಡುತ್ತಾರೆ ಎಂದು ಹೇಳಿದ್ದಾರೆ.