Sunday, April 20, 2025
Google search engine

Homeಸ್ಥಳೀಯವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ

ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಸಂಭ್ರಮದ ನಾಡಹಬ್ಬಕ್ಕೆ ಮೈಸೂರು ದೀಪಾಲಂಕರಿಂದ ಕಂಗೊಳಿಸುತ್ತಿದ್ದು, ಇಂದು ಬೆಳಗ್ಗೆ ೧೦.೧೫ರಿಂದ ೧೦.೩೦ರೊಳಗೆ ಶುಭ ವೃಶ್ಚಿತ ಲಗ್ನದಲ್ಲಿ ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಈಗಾಗಲೇ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಪೂಜೆಗೆ ಸಿದ್ಧಗೊಳಿಸಲಾಗಿದೆ.

ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರು ನಾಡಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಂತರ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಉದ್ಘಾಟನೆಯಾಗಲಿವೆ.
ಚಾಮುಂಡಿ ಬೆಟ್ಟದ ದೇವಾಲಯದ ಪಕ್ಕ ನಿರ್ಮಾಣವಾಗಿರುವ ವೇದಿಕೆಯಲ್ಲಿ ಹಂಸಲೇಖ ಅವರು ಸಾಂಪ್ರದಾಯಿಕ ದಸರಾ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವೇದಿಕೆಗೆ ಆಗಮಿಸಲಿದ್ದಾರೆ.

ಇಂದು ಅರಮನೆಯಲ್ಲಿ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ಮೊದಲ ದಿನ ರತ್ನ ಖಚಿತ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದ ಬಳಿಕ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಇಂದು ಬೆಳಗ್ಗೆ ಸಿಂಹಾಸನಕ್ಕೆ ಸಿಂಹ ಜೋಡಣೆ, ಅರಮನೆಯ ಒಳಗೆ ಗಣಪತಿ ಹೋಮ, ಚಾಮುಂಡಿ ಹೋಮ ಸೇರಿದಂತೆ ಹಲವು ಪೂಜೆ ನಡೆಯಲಿವೆ. ಬಳಿಕ ೧೦.೪೫ಕ್ಕೆ ಸಿಂಹಾಸನಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ೧೧.೩೦ರಿಂದ ೧೧.೫೦ಕ್ಕೆ ಖಾಸಗಿ ದರ್ಬಾರ್‌ನಲ್ಲಿ ರತ್ನಖಚಿತ ಸಿಂಹಾಸನವೇರಿ ಯದುವೀರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ವೇದಿಕೆ ಹಾಗೂ ದೇವಾಲಯದ ಸುತ್ತಮುತ್ತ ವಿಶೇಷವಾದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವೇದಿಕೆ ಕಾರ್ಯಕ್ರಮದ ಸುತ್ತ ಡಾಗ್ ಸ್ಕ್ವಾಡ್ ಪರಿಶೀಲನೆ ನಡೆಸಿದೆ.

RELATED ARTICLES
- Advertisment -
Google search engine

Most Popular