ಚಿಕ್ಕಮಗಳೂರು: ದೇಶದೆಲ್ಲೆಡೆ ಇಂದಿನಿಂದ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಮ್ಮ ರಾಜ್ಯದ ನಾಡ ಹಬ್ಬ ಮೈಸೂರು ದಸರಾ ಆರಂಭಗೊಂಡಿದ್ದು ಮೈಸೂರು ದಸರಾಕ್ಕೆ ಪ್ರೇರಣೆಯಾದ ಶೃಂಗೇರಿ ಶಾರದಾ ಮಠದಲ್ಲಿ ಇಂದಿನಿಂದ ೯ ದಿನಗಳ ಕಾಲ ವೈಭವದ ನವರಾತ್ರಿ ಉತ್ಸವ ನಡೆಯಲಿದೆ. ನಿತ್ಯವೂ ಶೃಂಗೇರಿ ಶಾರದಾಂಬೆ ನವ ರೂಪದಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಶ್ರೀ ಆದಿ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಪೀಠಗಳಲ್ಲಿ ಒಂದಾದ ಶೃಂಗೇರಿ ಶಾರದಾಂಬೆಯ ಸನ್ನಿಧಿ ಸಹ್ಯಾದ್ರಿ ಪರ್ವತಗಳ ತಪ್ಪಲಿನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿದೆ ತುಂಗಾ ನದಿ ತೀರದಲ್ಲಿ ವಾಸವಿರುವ ತಾಯಿ ಶಾರದೆ ಅಕ್ಷರ ದೇವಿ ಎಂದೆ ಖ್ಯಾತಿ ಪಡೆದಿದ್ದಾಳೆ.ಇಂದಿನಿಂದ ಶೃಂಗೇರಿ ಮಠದಲ್ಲಿ ೯ ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು ,ಲಕ್ಷಾಂತರ ಭಕ್ತರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.
ಶೃಂಗೇರಿ ದೇವಸ್ಥಾನವು ವಿದ್ಯಾಧಿದೇವತೆಯ ನೆಲವೀಡು. ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ಶಾರದೆಗೆ ಚಂಡಿಕಾ ಹೋಮ, ರಥೋತ್ಸವ, ವಿವಿಧ ಅಲಂಕಾರ, ಪೂಜೆ ನಡೆಯುತ್ತದೆ. ಇಲ್ಲಿ ಶಾರದಾ ದೇವಿ ನವರಾತ್ರಿ ಉತ್ಸವಗಳಲ್ಲಿ ಸರಸ್ವತಿ, ದುರ್ಗಾ, ಲಕ್ಷ್ಮೀ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.
ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಅಕ್ಟೋಬರ್ ೧೫ ರಿಂದ ೨೫ ರ ವರೆಗೆ ಶ್ರೀ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ನವರಾತ್ರಿಯ ಹಿಂದಿನ ದಿನ ೧೪ ರಂದು ಭಾದ್ರಪದ ಅಮಾವಾಸ್ಯೆ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಲಿದೆ ಶ್ರೀ ಶಾರದೆಗೆ ಆನೇಕ ವಿಧವಾದ ಫಲ-ಪಂಚಾಮೃತ ಅಭಿಷೇಕದ ನಂತರ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ ೧೦೮ ಸಲ ಶ್ರೀಸೂಕ್ತ ಪಠನದಿಂದ ಅಭಿಷೇಕ ನೆರವೇರಲಿದೆ. ಅಂದು ಶ್ರೀ ಶಾರದೆ ಜಗತ್ಪ್ರಸೂತಿಕಾ ಅಲಂಕಾರ ಕಂಗೊಳಿಸಲಿದ್ದಾಳೆ.
ಅಲಂಕಾರ: ಶ್ರೀ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶಾರದೆಗೆ ೧೫ ರಂದು ಶ್ರೀ ಶಾರದಾ ಪ್ರತಿಷ್ಠೆ, ಬ್ರಾಹ್ಮೀ ಅಲಂಕಾರ , ೧೬- ಹಂಸವಾಹಿನಿ , ೧೭- ಮಾಹೇಶ್ವರಿ , ೧೮- ಮಯೂರವಾಹನಾ ಅಲಂಕಾರ, ೧೯- ವೈಷ್ಣವೀ ಅಲಂಕಾರ, ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ, ಪುರಶ್ಚರಣಾರಂಭ , ೨೦- ಸರಸ್ವತ್ಯಾವಾಹನೆ, ವೀಣಾಶಾರದಾಲಂಕಾರ , ೨೧- ಮೋಹಿನಿ ಅಲಂಕಾರ, ೨೨- ರಾಜರಾಜೇಶ್ವರಿ ಅಲಂಕಾರ, ೨೩- ಮಹಾನವಮಿ, ಸಿಂಹವಾಹನಾಲಂಕಾರ, ಶತಚಂಡಿಯಾಗದ ಪೂರ್ಣಾಹುತಿ, ಗಜಾಶ್ವಪೂಜೆ, ಸಂಜೆ ವಿಜಯೋತ್ಸವ, ಶಮೀಪೂಜೆ, ೨೪- ವಿಜಯದಶಮಿ, ಗಜಲಕ್ಷ್ಮಿ ಅಲಂಕಾರ, ಲಕ್ಷ್ಮೀನಾರಾಯಣ ಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ, ೨೫- ಗಜಲಕ್ಷ್ಮೀ ಅಲಂಕಾರ, ಶೀ ಶಾರದಾಂಬಾ ಮಹಾರಥೋತ್ಸವ, ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ಈ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಶೃಂಗೇರಿ ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ, ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗಿ ದರ್ಬಾರ್ ನಡೆಸಲಾಗುತ್ತದೆ. ೯ ದಿನಗಳ ಕಾಲ ಪ್ರತಿ ಸಂಜೆ ೬ ಗಂಟೆಗೆ ಶ್ರೀಮಠದ ಆವರಣದಲ್ಲಿ ದರ್ಬಾರ್ ನಡೆಯಲಿದ್ದು ದೇಶ-ವಿಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.