ಮೈಸೂರು: ಮಹಿಷ ದಸರಾ ವೇಳೆ ಸಾಹಿತಿ ಪ್ರೊ. ಭಗವಾನ್‌ರು ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ರಾಷ್ಟ್ರಕವಿ ಕುವೆಂಪು ಈ ಹಿಂದೆ ಹೇಳಿದ್ದರು ಎಂಬ ಹೇಳಿಕೆಯನ್ನು ವಿರೋಧಿಸಿ ನಗರದ ಬಸ್ ನಿಲ್ದಾಣದ ಬಳಿ ತಾಲ್ಲೂಕು ಒಕ್ಕಲಿಗ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಭಗವಾನ್‌ರ ವಿರುದ್ದ ಧಿಕ್ಕಾರದ ಸುರಿಮಳೆ ಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಮಲ್ಲಯ್ಯ ೧೯೭೩ ರಿಂದ ಅವರನ್ನು, ಅವರ ನಡವಳಿಕೆಯನ್ನು ನಾನು ಗಮನಿಸುತ್ತ ಬಂದಿದ್ದು, ವಿದ್ಯಾರ್ಥಿ ದೆಶೆಯಿಂದಲೂ ವಿಕೃತಿಯನ್ನು ಮೆರೆಯುವ ವ್ಯಕ್ತಿತ್ವ ಪ್ರೊ.ಭಗವಾನ್‌ರದ್ದು ಎಂದೇಳಿದ ಅವರು ಒಕ್ಕಲಿಗರ ಬಗ್ಗೆ ಸಲ್ಲ್ಲದ ಹೇಳಿಕೆ ನೀಡಿರುವ ಭಗವಾನ್‌ರು ಕೂಡಲೇ ಸಮುದಾಯದ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ರಮೇಶಗೌಡ ಭಗವಾನ್‌ರು ಅವರ ಘನತೆಗೆ ತಕ್ಕ ಹೇಳಿಕೆ ನೀಡಿಲ್ಲ. ಭಗವಾನ್ ಈ ಹಿಂದೆ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದರು. ಶ್ರೀ ರಾಮನ ಕುರಿತಾಗಿ ವ್ಯಂಗ್ಯ ಮಾಡಿದ್ದರು. ಇದೀಗ ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಕುವೆಂಪು ಹೇಳಿದ್ದರು ಎಂದು ಹೇಳಿ ತಮ್ಮ ಒಕ್ಕಲಿಗರ ವಿರೋಧಿತನವನ್ನು ರಾಷ್ಟ್ರಕವಿ ಕುವೆಂಪು ಹೇಳಿದರು ಎಂದು ಬಿಂಬಿಸಿ ಕೊಂಡಿದ್ದಾರೆ. ಒಕ್ಕಲಿಗರು ವಿಧಾನಸೌಧ ವಿಕಾಸಸೌಧ ಸೇರಿದಂತೆ ಬೆಳಗಾವಿಯ ಸುವರ್ಣಸೌಧ ನಿರ್ಮಾಣ ಮಾಡಿದ್ದಾರೆ. ಹಲವಾರು ಅಣೆಕಟ್ಟು, ಬೃಹತ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಸರ್ವರಿಗೂ ಸಮ್ಮತವಾಗುವ ಆಡಳಿತ ನೀಡಿದ್ದಾರೆ. ಇಂಥಹ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿರುವ ಭಗವಾನ್‌ರಿಗೆ ಮುಂದೊಮ್ಮೆ ಮಸಿ ಬಳಿಯುವ ಕಾರ್ಯಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ಕೆ.ಎನ್.ರಾಜು ಅನ್ನಹಾಕುವ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನ ಕಾರಿ ಹೇಳಿಕೆ ನೀಡಿರುವ ಭಗವಾನ್‌ರು ಕೂಡಲೇ ಕ್ಷಮೆ ಕೇಳಬೇಕೆಂದರು. ಬೇವೂರಿನ ಬಿ.ಸಿ. ಯೋಗೇಶ್‌ಗೌಡ ಮಾತನಾಡಿ ಒಕ್ಕಲಿಗರು ಸರ್ವಜನರಿಗೂ ಆಹಾರ ನೀಡುವ ಮತ್ತು ಪ್ರಾಣಿ-ಪಕ್ಷಿಗಳಿಗೆ ಜೀವ ಜಂತುಗಳಿಗೆ ಅನ್ನ ನೀಡುವ ಸಾಹುಕಾರ. ಅಂಥಹ ಸಮುದಾಯದ ಬಗ್ಗೆ ಭಗವಾನ್‌ರು ಸಂಸ್ಕೃತಿ ಹೀನರು ಎಂದಿರುವುದು ಅಕ್ಷಮ್ಯ ಎಂದರು. ಇದೇ ರೀತಿ ಮುಂದುವರಿದರೆ ಬೆಂ-ಮೈ ರಸ್ತೆಯಲ್ಲಿ ಅವರು ಅಡ್ಡಾಡದಂತ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದರು.
ಹಾಗೆ ಮಾಡಲು ಹಿಂಜರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಭಗವಾನ್ ಹೇಳಿಕೆ ವಿರೋಧಿಸಿ ಧಿಕ್ಕಾರ ಕೂಗಲಾಯಿತು. ಇದೇ ಸಂದರ್ಭದಲ್ಲಿ ಬೈರಾಪಟ್ಟಣ ರಾಮಕೃಷ್ಣ, ಗೌಡಗೆರೆ ತಿಮ್ಮೇಗೌಡ, ಚಿಕ್ಕೇನಹಳ್ಳಿ ಸುಧಾಕರ್, ರ್‍ಯಾಂಬೋಸೂರಿ, ರಾಮೇಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.