Tuesday, April 22, 2025
Google search engine

Homeರಾಜ್ಯಸುದ್ದಿಜಾಲ11ನೇ ದಿನಕ್ಕೆ ಕಾಲಿರಿಸಿದ ಕಾವೇರಿ ಚಳುವಳಿ

11ನೇ ದಿನಕ್ಕೆ ಕಾಲಿರಿಸಿದ ಕಾವೇರಿ ಚಳುವಳಿ

ಚನ್ನಪಟ್ಟಣ: ನಗರದ ಕಾವೇರಿ ವೃತ್ತದಲ್ಲಿ ಕ.ಕ.ಜ.ವೇದಿಕೆಯ ರಾಜ್ಯಾಧ್ಯಕ್ಷ ರಮೇಶಗೌಡರ ನೇತೃತ್ವದಲ್ಲಿ ಕಾವೇರಿ ನದಿನೀರಿನ ಹಂಚಿಕೆ ವಿಚಾರದಲ್ಲಿ ಮಳೆ ಬೀಳದಿದ್ದ ವರ್ಷದಲ್ಲಿ ನೀರು ಹಂಚಿಕೆ ಕುರಿತಾಗಿ ಸಂಕಷ್ಠ ಸೂತ್ರ ರೂಪಿಸುವಂತೆಯೂ, ಹೆಚ್ಚು ಮಳೆ ನೀರು ಬಿದ್ದಾಗ ತಮಿಳುನಾಡಿಗೆ ಬಿಡಬೇಕಾದ ನೀರಿಗಿನ್ನ ಹೆಚ್ಚುವರಿ ಟಿ.ಎಂ.ಸಿ ನೀರನ್ನು ಮೇಕೆದಾಟು ಬಳಿ ಸಂಗ್ರಹಿಸಿ ಜಲ ವಿದ್ಯುತ್ ತಯಾರಿಕೆ ಮತ್ತು ಕುಡಿಯುವ ನೀರಿನ ಸಂಗ್ರಹ ಮಾಡುವಂತೆ ೧೦೦ ದಿನದ ಪ್ರತಿಜ್ಞೆ ಹೋರಾಟ ೧೧ ನೇ ದಿನಕ್ಕೆ ಕಾಲಿರಿಸಿದ್ದು ಕರ್ನಾಟಕ ರಾಜ್ಯ ರೈತ ಸಂಘ ಇಂದು ಹೋರಾಟದಲ್ಲಿ ಭಾಗಿಯಾಯಿತು.

ಈ ಸಂದರ್ಭದಲ್ಲಿ ಕ.ರಾ.ರೈ.ಸಂಘದ ವಿಭಾಗೀಯ ಉಪಾಧ್ಯಕ್ಷ ಆಣಿಗೆರೆ ಕೆ. ಮಲ್ಲಯ್ಯನವರು ಮಾತನಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀರಿನ ವಿಚಾರವಾಗಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬರುತ್ತಿವೆ. ನ್ಯಾಯಾಧೀಕರಣ ಕೂಡ ವಾಸ್ತವ ಸ್ಥಿತಿ ಅರಿಯದೆ ತೀರ್ಪು ನೀಡುತ್ತಿದೆ. ಈ ಕಾರಣ ಸಂಕಷ್ಠ ಸೂತ್ರ ರಚನೆ ಆಗಬೇಕು ಮತ್ತು ಮೇಕೆದಾಟು ಯೋಜನೆ ಆರಂಭ ಮಾಡಬೇಕು ಎಂದು ಆಗ್ರಹಿಸಿದರಲ್ಲದೆ, ಅಂತರ ರಾಜ್ಯ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗಳು ಮೂಗು ತೂರಿಸುವಂತಿಲ್ಲ ಎಂದು ಪ್ರೊ. ಎಂ.ಡಿ.ಎನ್.ರವರು ಹೇಳಿದ್ದ ಮಾತುಗಳನ್ನು ಮೆಲುಕು ಹಾಕಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ರಾಮೇಗೌಡ ಮಾತನಾಡಿ ೪೫ ಕೋಟಿ ರೂ ಬೇನಾಮಿ ಹಣ ಗುತ್ತಿಗೆದಾರರ ಬಳಿಸಿಕ್ಕರೂ ಇನ್ನು ಕ್ರಮಕೈಗೊಂಡಿಲ್ಲ. ಮೇಕೆದಾಟು ವಿಚಾರದಲ್ಲಿ ಭಾರೀ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಬಳಿಕ ತೆಪ್ಪಗಿರುವ ಸರ್ಕಾರದ ಕ್ರಮವನ್ನು ಕಟುವಾಗಿ ಖಂಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ನಸಂದ್ರ ರಾಜು ಮಾತನಾಡಿ ಮೇಕೆದಾಟು ವಿಚಾರದಲ್ಲಿ ಮೇಕೆದಾಟಿನಿಂದ – ವಿಧಾನಸೌದದವರೆಗೆ ಬೃಹತ್ ಪಾದಯಾತ್ರೆ ಮಾಡಿ, ಕಬಾಬ್‌ಗಳನ್ನು ತಿಂದು ನಡಿಗೆ ಮಾಡಿದ ವೀರಾವೇಷ ಅಧಿಕಾರಕ್ಕೆ ಬಂದ ಬಳಿಕ ಕಾಣುತ್ತಿಲ್ಲ ಎಂದು ಲೇವಡಿ ಮಾಡಿದರು.

ಆ ಬಳಿಕ ಮಾತನಾಡಿದ ಕ.ಕ.ಜ.ವೇದಿಕೆ ರಾಜ್ಯಾಧ್ಯಕ್ಷ ರಮೇಶಗೌಡ ಮುಂದಿನ ತಲೆಮಾರಿಗೆ ಈ ವಿವಾದ ಅಂತ್ಯವಾಗಬೇಕು ಎಂಬ ದೃಷ್ಠಿಯಿಂದ ನಿರಂತರ ಹೋರಾಟ ಮಾಡುವುದು, ನೂರು, ಇನ್ನೂರು, ಸಾವಿರ ದಿನವಾಗಲಿ ಈ ಹೋರಾಟ ಕೈ ಬಿಡದೆ ನಿರಂತರವಾಗಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರೋಣ ಹಾಗೆಯೇ ೨೫,೭೫,೧೦೦,೨೦೦,೩೦೦ನೇ ದಿನಗಳಂದು ತಲಕಾವೇರಿಗೆ ಯಾತ್ರೆ, ಮಂಡ್ಯದ ಕಾವೇರಿ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಧರಣಿ ಸ್ಥಳ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನ ಮಂತ್ರಿಗಳನ್ನು ಕಾಣಲು ಡೆಲ್ಲಿಯವರೆಗೆ ಹೋಗಿ ಹೋರಾಟ ಮಾಡೋಣ. ಈ ಹಿಂದೆ ಆಗಿರುವ ಅನ್ಯಾಯ ಸರಿಪಡಿಸುವುದು ಸೇರಿದಂತೆ, ಮುಂದೆ ಮೇಕೆದಾಟಿಗೆ ಅಡಿಗಲ್ಲು ಹಾಕುವಂತೆ ಸರ್ಕಾರದ ಮೇಲೆ ಒತ್ತಡ ತರುವುದು ಮತ್ತು ಸಂಕಷ್ಟ ಸೂತ್ರ ರೂಪಿಸುವಂತೆ ಆಗ್ರಹಿಸಲು ಸರ್ಕಾರದ ಮೇಲೆ ಒತ್ತಡ ಮಾಡಬೇಕೆಂದರು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಮೇಗೌಡ, ಜಿಲ್ಲಾ ಗೌರವ ಅಧ್ಯಕ್ಷ ಪುಟ್ಟಸ್ವಾಮಿ, ರೈತ ಸಂಘದ ಕಾರ್ಯದರ್ಶಿ ನಾಗರಾಜು, ತಿಮ್ಮೇಗೌಡ್ರು ಗೌಡಗೆರೆ, ಕೋದಂಡರಾಮು, ರಾಮಕೃಷ್ಣಯ್ಯ ಬೈರಾಪಟ್ಟಣ, ಎಂ.ಬೋರೇಗೌಡ, ಶ್ಯಾಮ್, ಸಿದ್ದಪ್ಪಾಜಿ, ಪವನ್, ಚಿನ್ಮಯ್, ಸುಧಾಕರ್, ರ್‍ಯಾಂಬೋಸೂರಿ, ಸೇರಿದಂತೆ ಹಲವರು ಭಾಗಿಯಾಗಿ ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದರು.

RELATED ARTICLES
- Advertisment -
Google search engine

Most Popular