ಹನೂರು : ತುಂಬು ಗರ್ಭಿಣಿಯನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ೧೦೮ ಆಂಬ್ಯುಲೆನ್ಸ್‌ನಲ್ಲಿ ಹೆರಿಗೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಶಾಗ್ಯ ಗ್ರಾಮದ ಗೋವಿಂದ ಎಂಬವರ ಪತ್ನಿ ಲಕ್ಷ್ಮಿ ಅವರು ನಾಲ್ಕನೇ ಹೆರಿಗೆಗಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ೧೦೮ ಆಂಬ್ಯುಲೆನ್ಸ್‌ನಲ್ಲಿ ತೆರಳುತ್ತಿದ್ದರು. ರಸ್ತೆ ಹದ ಗೆಟ್ಟಿದ್ದರಿಂದ ಮಾರ್ಗ ಮಧ್ಯದಲ್ಲಿಯೇ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ತುರ್ತು ವೈದ್ಯಕೀಯ ಸಿಬ್ಬಂದಿ ಪಂದಯ್ಯ ಹಾಗೂ ಚಾಲಕ ಲಿಂಗರಾಜುರವರ ಸಹಕಾರದಿಂದ ಹೆರಿಗೆ ಮಾಡಿಸಿದ್ದು, ಲಕ್ಷ್ಮಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ತಾಯಿ ಹಾಗೂ ಮಗು ಆರೋಗ್ಯ ದಿಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬಂಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಹನೂರು-ಬಂಡಳ್ಳಿ ರಸ್ತೆ ತೀವ್ರ ಹದ ಗೆಟ್ಟಿರುವುದರಿಂದ ವಾಹನ ಸಂಚರಿಸುವುದೇ ಕಷ್ಟಕರವಾಗಿದೆ. ಈಗಾಗಲೇ ಈ ರಸ್ತೆಯಲ್ಲಿ ಬಂಡಳ್ಳಿ ಗ್ರಾಮದ ಗರ್ಭಿಣಿಯೋರ್ವರು ಹೆರಿಗೆಗೆ ಆಗಮಿ ಸುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿಯೇ ಗರ್ಭ ಪಾತವಾದ ಘಟನೆಯೂ ನಡೆದಿದೆ.