ಮೈಸೂರು: ಶರನ್ನವರಾತ್ರಿಯ ಮೊದಲ ದಿನ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಪೂಜೆ ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಿತು. ಯದುವೀರ್ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ನಂತರ ಸಿಂಹಾಸನದಲ್ಲಿ ಆಸೀನರಾಗಿ ಖಾಸಗಿ ದರ್ಬಾರ್ ಕೈಗೊಂಡರು.

ಧಾರ್ಮಿಕ ಕೈಂಕರ್ಯಗಳು: ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ಶರನ್ನವರಾತ್ರಿಯ ಪೂಜೆಗಳು ಆರಂಭವಾದವು. ೬ರಿಂದ ೬.೨೫ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಗಣಪತಿ ಹೋಮ ಸೇರಿದಂತೆ ಹಲವು ಹೋಮಗಳು ನೆರವೇರಿದವು. ೭.೦೫ರಿಂದ ೦೭.೪೫ರ ನಡುವೆ ಯದುವೀರ್ ಒಡೆಯರ್ ಹಾಗೂ ರಿಷಿಕಾ ಒಡೆಯರ್ ಅವರಿಗೆ ಕಂಕಣ ಧಾರಣೆಯಾಯಿತು. ಇದಕ್ಕೂ ಮೊದಲು ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿಗೆ ಆನೆ ಬಾಗಿಲಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನವರಾತ್ರಿಯ ಪೂಜೆಗಳು ರಾಜ ಪರಂಪರೆಯಂತೆ ನೆರವೇರಿದವು.
ಮಧ್ಯಾಹ್ನ ೦೧.೪೫ರಿಂದ ೦೨.೦೫ರವರೆಗೆ ತಾಯಿ ಚಾಮುಂಡೇಶ್ವರಿ ದೇವಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನಿಸಲಾಯಿತು. ಸಿಂಹಾಸನ ಪೂಜೆಯ ನಂತರ ಯದುವೀರ್ ಅವರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಆಶೀರ್ವಾದ ಪಡೆದರು.
