ಗದಗ: ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಾಟಾ ಸುಮೋ ನಡುವೆ ಡಿಕ್ಕಿಯಾಗಿ ಐದು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೂಲಗಳ ಪ್ರಕಾರ, ಕಲಬುರಗಿಯಿಂದ ಗಜೇಂದ್ರಗಡ ಮಾರ್ಗವಾಗಿ ಶಿರಹಟ್ಟಿ ಫಕ್ಕಿರೇಶ್ವರ ಮಠಕ್ಕೆ ಟಾಟಾ ಸುಮೋ ಹೊರಟಿತ್ತು. ಗದಗದಿಂದ ಗಜೇಂದ್ರಗಡಕ್ಕೆ ಬಸ್ ಹೊರಟಿತ್ತು. ಮುಖಾಮುಖಿ ಡಿಕ್ಕಿ ಪರಿಣಾಮ ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದು, ಮೃತರ ಗುರುತು ಪತ್ತೆ ಇನ್ನೂ ಆಗಿಲ್ಲ ಎಂದು ಪೊಲೀಸ್ ಮೂಲಗಳುತಿಳಿಸಿವೆ. ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.