ಪಿರಿಯಾಪಟ್ಟಣ: ತಾಲೂಕಿನ ರಾವಂದೂರು ಬಳಿಯ ಹರಳಹಳ್ಳಿ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ಸಡಗರದಿಂದ ಜರುಗಿತು.ಹಬ್ಬದ ವಿಶೇಷ ಗ್ರಾಮದ ಪ್ರಮುಖ ಬೀದಿಗಳನ್ನು ವಿದ್ಯುತ್ ದೀಪಲಂಕಾರ ತಳಿರು ತೋರಣದಿಂದ ಅಲಂಕರಿಸಿ ದೇವಾಲಯ ಬಳಿಯ ವೃತ್ತವನ್ನು ಭಾಗವ ಧ್ವಜದಿಂದ ಸಿಂಗರಿಸಲಾಗಿತ್ತು, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಿ ಪ್ರತಿ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ ಅತ್ಯುತ್ತಮವಾಗಿ ಮೂಡಿ ಬಂದ ರಂಗೋಲಿಗಳಿಗೆ ಬಹುಮಾನ ವಿತರಿಸಲಾಯಿತು.
ತೀರ್ಪುಗಾರರಾಗಿ ಆಗಮಿಸಿದ್ದ ಮಾಜಿ ಸೈನಿಕರಾದ ರಾವಂದೂರು ಶಿವು ಅವರು ಗ್ರಾಮೀಣ ಕ್ರೀಡೆಗಳ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ನಮ್ಮಲ್ಲಿನ ಧಾರ್ಮಿಕ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಬೇಕಿದೆ ಎಂದು ಕಿವಿಮಾತು ಹೇಳಿದರು, ಪುರುಷರಿಗಾಗಿ ಏರ್ಪಡಿಸಿದ್ದ ಮಡಿಕೆ ಒಡೆಯುವ ಸ್ಪರ್ಧೆ ರಂಜಿಸಿತು, ಗೌರಿ ಗಣೇಶ ಹಬ್ಬದ ದಿನ ದೇವಾಲಯದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ಬೆಳಿಗ್ಗೆ ಹಾಗೂ ರಾತ್ರಿ ಅರ್ಚಕರಾದ ಲೋಕೇಶ್ ಆರಾಧ್ಯ ನೇತೃತ್ವದಲ್ಲಿ ವಿಶೇಷ ಪೂಜೆಗಳು ಜರುಗಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ವಿಶೇಷ ಹೂ ಹಾಗೂ ದೀಪಾಲಂಕರದಿಂದ ಅಲಂಕರಿಸಿದ್ದ ಎತ್ತಿನ ಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಗಾರಿ ಹಾಗೂ ಮಂಗಳವಾದ್ಯದ ಸದ್ದಿನೊಂದಿಗೆ ಮೆರವಣಿಗೆ ನಡೆಸಿ ಪ್ರತಿ ಮನೆಗಳ ಮುಂದೆ ಪೂಜಿಸಲಾಯಿತು.
ನಗಾರಿ ಸದ್ದಿಗೆ ಯುವಕರು ಹಾಗೂ ಪುಟಾಣಿಗಳು ನರ್ತಿಸಿ ರಂಜಿಸಿದರು, ಆಕರ್ಷಕ ಬಾಣ ಬಿರುಸು ಸಿಡಿಮುದ್ದು ಪ್ರದರ್ಶನ ನಡೆಸಿ ಗ್ರಾಮದ ದೇವಾಲಯ ಬಳಿಯ ಕೆರೆಯಲ್ಲಿ ಗಂಗೆಯನ್ನು ಪೂಜಿಸುವ ಮೂಲಕ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಈ ವೇಳೆ ಗ್ರಾಮದ ಯಜಮಾನರು ಜನಪ್ರತಿನಿಧಿಗಳು ಯುವಕ ಹಾಗೂ ಮಹಿಳಾ ಸಂಘದವರು ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.