ಮೈಸೂರು: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ ಯೋಜನೆಗಳು ಎಲ್ಲ ಜಾತಿ ಧರ್ಮದ ಜನರಿಗೂ ತಲುಪುತ್ತಿದ್ದು, ಅವಕಾಶ ವಂಚಿತರಿಗೆ ನ್ಯಾಯ ಒದಗಿಸುವ ಯೋಜನೆಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಸಿದ್ದಸಿಂಹಾಸನದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವಿಭಾಗೀಯ ಮಠ ಮೈಸೂರು ಇವರ ವತಿಯಿಂದ ಗುರುಪೀಠದ ಬಳಿ ಆಯೋಜಿಸಿರುವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದುಳಿದ, ದಲಿತರು, ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಬೇಕು. ಶಕ್ತಿ ಯೋಜನೆಯಡಿ ೭೦ ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆಗೆ ಚುರುಕುಗೊಂಡು, ರಾಜ್ಯದ ಜಿಡಿಪಿ ಹೆಚ್ಚಾಗುತ್ತಿದೆ. ರಾಜ್ಯದ ತಲಾವಾರು ಆದಾಯ ಹೆಚ್ಚಾಗಿದೆ. ಪ್ರತಿ ಅರ್ಹ ಫಲಾನುಭವಿ ಕುಟುಂಬಕ್ಕೆ ವಾರ್ಷಿಕವಾಗಿ ೫೦ ರಿಂದ ೬೦ ಸಾವಿರ ಸರ್ಕಾರ ಒದಗಿಸುತ್ತಿದ್ದು, ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂದು ವಿವರಿಸಿದರು.
ಆರೋಪಗಳು ಸತ್ಯವಲ್ಲ: ಜನರ ಆಶೀರ್ವಾದದ ಫಲದಿಂದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಇತರೆ ರಾಜಕೀಯ ಪಕ್ಷಗಳು ರಾಜಕೀಯ ಪ್ರೇರಿತವಾಗಿ ಟೀಕೆ ಮಾಡುತ್ತದೆ. ವಿರೋಧಪಕ್ಷಗಳು ಮಾಡುವುದು ಕೇವಲ ಆರೋಪಗಳೇ ಹೊರತು, ಸತ್ಯವಲ್ಲ ಎಂದರು.
ನಾನು ರಾಜಕೀಯಕ್ಕೆ ಬಂದು ೫೦ ವರ್ಷಗಳಾಗಿದೆ. ೨೦೦೫ ರಲ್ಲಿಜೆಡಿಎಸ್ ನಿಂದ ನನ್ನನ್ನು ಉಚ್ಛಾಟನೆ ಮಾಡಿದ ನಂತರ ಅನಿವಾರ್ಯವಾಗಿ ಕಾಂಗ್ರೆಸ್ ಸೇರಬೇಕಾಗಿ ಬಂತು. ಅಹ್ಮದ್ ಪಟೇಲ್ ಸೇರಿದಂತೆ ಅಂದಿನ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ತಿಳಿಸಿದರು. ಜನರ ಆಶೀರ್ವಾದದಿಂದ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದ್ದು, ಜಾತ್ಯಾತೀತ ರಾಜಕೀಯ ನೀತಿಯನ್ನು ಪಾಲಿಸುವುದಾಗಿ ತಿಳಿಸಿದರು. ಸಂವಿಧಾನದಲ್ಲಿ ತಿಳಿಸಿದಂತೆ ಎಲ್ಲ ಜಾತಿ ಮತ್ತು ಧರ್ಮದವರನ್ನು ಗೌರವಿಸಿ, ಜಾತ್ಯಾತೀತವಾಗಿರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ, ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ವರ್ಗಗಳ ಪರವಾಗಿ ನಿಲ್ಲುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈ ಸಮಾರಂಭದಲ್ಲಿ ಕಾಗಿನೆಲೆ ಶ್ರೀಗಳಾದ ಶ್ರೀ ಶಿವನಂದಾಪುರಿ ಮಹಾಸ್ವಾಮೀಜಿ, ಶ್ರೀ ಈಶ್ವರನಂದಾ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಅಡಗೂರು ವಿಶ್ವನಾಥ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಶಂಕರ್, ಶಾಸಕರಾದ ಡಿ. ರವಿಶಂಕರ್, ಹರೀಶ್‌ಗೌಡ, ಶ್ರೀವತ್ಸ, ಹನೂರು ಮಂಜುನಾಥ್, ಪುಟ್ಟರಂಗಶೆಟ್ಟಿ, ಗಣೇಶ್ ಮಹದೇವಪ್ರಸಾದ್, ಗೋವಿಂದಪ್ಪ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಜಿ.ಪಂ. ಮಾಜಿ ಅಧ್ಯಕ್ಷ ಕೆ. ಮರೀಗೌಡ, ಬಿ.ಎಂ. ರಾಮು, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ, ಕೋಟೆ ಶಿವಪ್ಪ, ನಗರಪಾಲಿಕೆ ಸದಸ್ಯ ಗೋಪಿ, ಕೆ.ಆರ್. ನಗರ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿ ಶಿವಣ್ಣ, ಕೋಳಿ ಪ್ರಕಾಶ್, ಪುಟ್ಟಬಸವೇಗೌಡ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜು, ಕಾರ್ಯಾಧ್ಯಕ್ಷ ನಾಡನಹಳ್ಳಿ ರವಿ, ಕೃಷ್ಣಕುಮಾರ್ ಸಾಗರ್, ಜೆ.ಜೆ. ಆನಂದ, ಶಿವಣ್ಣ, ಮಾಕನಹುಂಡಿ ರವಿ, ಕಡಕೊಳ ಶ್ರೀಕಂಠ ತೊಂಡೇಗೌಡ, ಮಾದೇಗೌಡ ಹಾಜರಿದ್ದರು.